ಕೇಂದ್ರದ ಸೂಚನೆಯಂತೆ ಎಂಎಸ್‍ಪಿ ನೇರವಾಗಿ ರೈತರ ಬ್ಯಾಂಕ್‍ ಗೆ ಜಮೆ ಮಾಡಲಿರುವ ಪಂಜಾಬ್ ಸರಕಾರ

Update: 2021-04-09 09:33 GMT

ಚಂಡೀಗಢ: ಕೇಂದ್ರದ ಸೂಚನೆಯಂತೆ ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಕಮಿಷನ್ ಏಜಂಟರ ಮುಖಾಂತರ ನೀಡುವ ಬದಲು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ  ಮಾಡಲು ಪಂಜಾಬ್ ಸರಕಾರ ಒಪ್ಪಿದೆ. ಶನಿವಾರ ರಬಿ ಮಾರುಕಟ್ಟೆ ಋತು ಆರಂಭಗೊಳ್ಳುವುದರಿಂದ ಆ ದಿನದಿಂದ ಈ ನೇರ ಆನ್ಲೈನ್ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ.

ಕೇಂದ್ರದ ಪರವಾಗಿ ಪಂಜಾಬ್ ಅಕ್ಕಿ ಮತ್ತು ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುತ್ತದೆ. ಸಾಮಾನ್ಯವಾಗಿ  ಈ ಕನಿಷ್ಠ ಬೆಂಬಲ ಬೆಲೆಯನ್ನು ರಾಜ್ಯದಲ್ಲಿ ಅರ್ಥಿಯಾಸ್ ಎಂದು ಕರೆಯಲ್ಪಡುವ ಕಮಿಷನ್ ಏಜಂಟರುಗಳ ಮೂಲಕ ನೀಡಲಾಗುತ್ತದೆ. ಈ ವಿಚಾರ ಕುರಿತು ಚರ್ಚಿಸಲು ಗುರುವಾರ ಪಂಜಾಬ್ ವಿತ್ತ ಸಚಿವ ಮನ್‍ಪ್ರೀತ್ ಸಿಂಗ್ ಅವರು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿಯಾಗಿದ್ದರು. ನಂತರ ಮಾತನಾಡಿದ ಸಿಂಗ್, ಸರಕಾರ ತಮಗೆ  ನೇರ  ಬ್ಯಾಂಕ್ ವರ್ಗಾವಣೆ ಮಾಡುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ.

"ಪಂಜಾಬ್‍ನಲ್ಲಿ ಸಾಂಪ್ರದಾಯಿಕ ಅರ್ಥಿಯಾಸ್ ವ್ಯವಸ್ಥೆಯಿರುವುದರಿಂದ ನಾವು ಸ್ವಲ್ಪ ಸಮಯ ಕೇಳಿದ್ದೆವು. ಆದರೆ ಕೇಂದ್ರ ಅದಕ್ಕೆ ನಿರಾಕರಿಸಿದೆ. ನಮ್ಮ ಸತತ ಪ್ರಯತ್ನದ ಹೊರತಾಗಿಯೂ ಕೇಂದ್ರ ನಮ್ಮ ಮಾತುಗಳನ್ನು ಕೇಳಲು ಒಪ್ಪಿಲ್ಲ" ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಪಾವತಿ ಮಾಡಿದಲ್ಲಿ ಮಾತ್ರ ತಾನು ಬೆಳೆ ಖರೀದಿಸಿ ಕನಿಷ್ಠ ಬೆಂಬಲ ದರ ನೀಡುವುದಾಗಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಹೇಳಿದೆ. ರಾಜ್ಯ ಸರಕಾರಕ್ಕೆ ಈ ಹಿಂದಿನ ಪದ್ಧತಿಯನ್ನು ಕೈಬಿಡುವುದು ಕಷ್ಟವಾದರೂ, ಕೇಂದ್ರದ ಆದೇಶ ಪಾಲಿಸುವುದರ ಜತೆಗೆ ಕಮಿಷನ್ ಏಜಂಟರ ಹಿತವನ್ನೂ ಕಾಪಾಡಲು ಯತ್ನಿಸಲಾಗುವುದು ಎಂದು ಪಂಜಾಬ್ ಆಹಾರ ಸಚಿವ ಭರತ್ ಭೂಷಣ್ ಆಶು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News