ರಾಹುಲ್ ಗಾಂಧಿ ಈ ತನಕ ಲಸಿಕೆ ಸ್ವೀಕರಿಸಿಲ್ಲವೇಕೆ? ಬಿಜೆಪಿ ಪ್ರಶ್ನೆ

Update: 2021-04-09 15:21 GMT

ಹೊಸದಿಲ್ಲಿ: ತಕ್ಷಣವೇ ಲಸಿಕೆ ರಫ್ತು ನಿಲ್ಲಿಸಿ, ಇತರ ಕೋವಿಡ್-19 ಲಸಿಕೆಯತ್ತಲೂ ಗಮನ ಹರಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ಇಂದು ತಿರುಗೇಟು ನೀಡಿದೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ರಾಹುಲ್ ಗಾಂಧಿ ಇನ್ನೂ ಲಸಿಕೆ ಏಕೆ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.ಅವರೊಬ್ಬ ವಿಫಲ ಅರೆಕಾಲಿಕ ರಾಜಕಾರಣಿ ಎಂದೂ ದೂಷಿಸಿದರಲ್ಲದೆ, ಔಷಧ ಕಂಪೆನಿಗಳ ಪರವಾಗಿ ಲಾಬಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

"ಭಾರತವು ಲಸಿಕೆ ಕೊರತೆಯನ್ನು ಎದುರಿಸುತ್ತಿಲ್ಲ. ಆದರೆ ಗಾಂಧಿಯವರು ಗಮನದ ಕೊರತೆಯಿಂದ ಬಳಲುತ್ತಿದ್ದಾರೆ. ರಾಹುಲ್ ಗಾಂಧಿ ಇನ್ನೂ ಲಸಿಕೆ ಏಕೆ ತೆಗೆದುಕೊಳ್ಳಲಿಲ್ಲ? ಇದು ಕಣ್ತಪ್ಪಿನಿಂದ ಆಗಿದೆಯೋ ಅಥವಾ ಅವರು ಲಸಿಕೆಯನ್ನು ಬಯಸುವುದಿಲ್ಲವೋ ಅಥವಾ ಅವರು ಈಗಾಗಲೇ ರಹಸ್ಯ ವಿದೇಶಿ ಸ್ಥಳದಲ್ಲಿ ಲಸಿಕೆಯನ್ನು ತೆಗೆದುಕೊಂಡಿದ್ದಾರೋ? ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಡಿಸೆಂಬರ್ ನಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಕ್ಕೆ ಮೊದಲು ತನ್ನ ಅಜ್ಜಿಯನ್ನು ಭೇಟಿಯಾಗಲು ಇಟಲಿಗೆ ಹೋಗಿದ್ದನ್ನೂ ಬಿಜೆಪಿ ಟೀಕಿಸಿತ್ತು.

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಲಸಿಕೆಗಳ ಕೊರತೆಗಳಿಲ್ಲ. ಆದರೆ ಅಲ್ಲಿ ಆರೋಗ್ಯ ಕಾಳಜಿಯ ಬಗ್ಗೆ ಮೂಲ ಬದ್ಧತೆಯೇ ಇಲ್ಲವಾಗಿದೆ. ಈ ಕುರಿತು ಅವರು ತಮ್ಮ  ಪಕ್ಷದ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಲಸಿಕೆ ಕೊರತೆಯ ಬಗ್ಗೆ ರಾಹುಲ್ ಕೇಳಿದ್ದಕ್ಕೆ ಪ್ರಸಾದ್  ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News