ಕೊರೋನ ನಿಯಮ ಉಲ್ಲಂಘನೆ: ನಾರ್ವೆ ಪ್ರಧಾನಿಗೆ ದಂಡ

Update: 2021-04-09 16:08 GMT

ಓಸ್ಲೊ (ನಾರ್ವೆ), ಎ. 9: ಕೋವಿಡ್-19ಕ್ಕೆ ಸಂಬಂಧಿಸಿದ ಸುರಕ್ಷಿತ ಅಂತರ ನಿಯಮಗಳ ಉಲ್ಲಂಘನೆಗಾಗಿ ಪ್ರಧಾನಿ ಎರ್ನಾ ಸೋಲ್‌ಬರ್ಗ್‌ರಿಗೆ ದಂಡ ಹಾಕಿರುವುದಾಗಿ ನಾರ್ವೆ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಪ್ರಧಾನಿ ಸೋಲ್‌ಬರ್ಗ್ ತನ್ನ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಂಡಿರುವುದಕ್ಕಾಗಿ ಅವರಿಗೆ 20,000 ನಾರ್ವೇಜಿಯನ್ ಕ್ರೌನ್ (ಸುಮಾರು 1.75 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಓಲ್ ಸೇವರುಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತನ್ನ 60ನೇ ಹುಟ್ಟು ಹಬ್ಬವನ್ನು ನಾರ್ವೆಯ ಎರಡು ಬಾರಿಯ ಪ್ರಧಾನಿ ಎರ್ನಾ ಫೆಬ್ರವರಿ ತಿಂಗಳ ಕೊನೆಯಲ್ಲಿ 13 ಕುಟುಂಬ ಸದಸ್ಯರೊಂದಿಗೆ ರಿಸಾರ್ಟ್‌ವೊಂದರಲ್ಲಿ ಆಚರಿಸಿದ್ದರು.

 ಹತ್ತಕ್ಕಿಂತ ಹೆಚ್ಚಿನ ಜನರು ಒಟ್ಟಿಗೆ ಸೇರಬಾರದು ಎಂಬ ಸರಕಾರದ ನಿಯಮದ ಹೊರತಾಗಿಯೂ ಅವರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದಕ್ಕಾಗಿ ಅವರು ಕಳೆದ ತಿಂಗಳು ಕ್ಷಮೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News