ನ್ಯೂಜರ್ಸಿಯ ಮನೆಯಲ್ಲಿ ಭಾರತೀಯ ಟೆಕ್ಕಿ, ಪತ್ನಿ ಶವವಾಗಿ ಪತ್ತೆ

Update: 2021-04-09 16:20 GMT

ನ್ಯೂಜರ್ಸಿ (ಅಮೆರಿಕ), ಎ. 9: ಭಾರತೀಯ ಗಂಡ-ಹೆಂಡತಿ ಅಮೆರಿಕದ ನ್ಯೂಜರ್ಸಿಯಲ್ಲಿನ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಬಾಲ್ಕನಿಯಲ್ಲಿ ಅವರ ನಾಲ್ಕು ವರ್ಷದ ಮಗಳು ಒಂಟಿಯಾಗಿ ಅಳುತ್ತಿರುವುದು ನೆರೆಕರೆಯವರ ಗಮನಕ್ಕೆ ಬಂದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ನ್ಯೂಜರ್ಸಿಯ ನಾರ್ತ್ ಆರ್ಲಿಂಗ್ಟನ್ ಪಟ್ಟಣದ ರಿವರ್‌ ವ್ಯೂ ಗಾರ್ಡನ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಲಾಜಿ ಭರತ್ ರುದ್ರವರ್ (32) ಮತ್ತು ಅವರ ಪತ್ನಿ ಆರತಿ ಬಾಲಾಜಿ ರುದ್ರವರ್ (30)ರ ಮೃತದೇಹಗಳು ಪತ್ತೆಯಾಗಿವೆ.

 ‘‘ನನ್ನ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರುವುದನ್ನು ನೆರೆಕರೆಯವರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ನೆರೆಕರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮನೆಯೊಳಗೆ ಪ್ರವೇಶಿಸಿದರು’’ ಎಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈಯಿಂದ ಬಾಲಾಜಿಯ ತಂದೆ ಭರತ್ ರುದ್ರವರ್ ಪಿಟಿಐಗೆ ತಿಳಿಸಿದರು.

‘‘ಗಂಡನು ಹೆಂಡತಿಯ ಹೊಟ್ಟೆಗೆ ತಿವಿದಂತೆ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಪತ್ನಿಯು ಗಂಡನನ್ನು ಎದುರಿಸಲು ವಿಫಲ ಯತ್ನ ಮಾಡಿರುವರೆಂದು ಭಾವಿಸಲಾಗಿದೆ’’ ಎಂದು ಅಮೆರಿಕ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘‘ಸಾವಿಗೆ ಕಾರಣವೇನು ಎನ್ನುವುದು ನನಗೆ ತಿಳಿದಿಲ್ಲ. ಅವರದು ಸಂತೃಪ್ತ ಕುಟುಂಬವಾಗಿತ್ತು ಹಾಗೂ ಉತ್ತಮ ನೆರೆಕರೆಯವರನ್ನು ಹೊಂದಿದ್ದರು. ನನ್ನ ಸೊಸೆ ಏಳು ತಿಂಗಳ ಗರ್ಭಿಣಿಯಾಗಿದ್ದರು’’ ಎಂದು ಭರತ್ ರುದ್ರವರ್ ಹೇಳಿದ್ದಾರೆ.

ಬಾಲಾಜಿ ರುದ್ರವರ್ ಐಟಿ ಉದ್ಯೋಗಿಯಾಗಿದ್ದು, 2015ರ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ಹೆಂಡತಿಯ ಜೊತೆಗೆ ಹೋಗಿದ್ದರು. ಅವರ ಪತ್ನಿ ಗೃಹಿಣಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News