ರೈಲು ಸೇವೆ ಸ್ಥಗಿತವಿಲ್ಲ, ಕೋವಿಡ್ ನೆಗೆಟಿವ್ ಪ್ರಮಾಣಪತ್ರದ ಅಗತ್ಯವಿಲ್ಲ: ರೈಲ್ವೇ ಇಲಾಖೆ

Update: 2021-04-09 16:56 GMT

ಹೊಸದಿಲ್ಲಿ, ಎ.9: ರೈಲು ಸೇವೆಗಳನ್ನು ಮೊಟಕುಗೊಳಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಯೋಜನೆಯಿಲ್ಲ. ಬೇಡಿಕೆ ಹೆಚ್ಚಿದರೆ ಹೆಚ್ಚುವರಿ ರೈಲು ಸೇವೆ ಒದಗಿಸಲೂ ಸಿದ್ಧ ಎಂದು ರೈಲ್ವೇ ಇಲಾಖೆ ಹೇಳಿದೆ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು ಎಂಬ ವರದಿಯನ್ನೂ ಇಲಾಖೆ ತಳ್ಳಿಹಾಕಿದೆ.

ದೇಶದಲ್ಲಿ ಕೊರೋನ ಸೋಂಕು ಪ್ರಕರಣಗಳಲ್ಲಿ ಹಠಾತ್ ಹೆಚ್ಚಳವಾದ ಬಳಿಕ ಕೆಲವೆಡೆ ಲಾಕ್‌ಡೌನ್ ಹಾಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಆತಂಕಿತರಾದ ವಲಸೆ ಕಾರ್ಮಿಕರು ಊರಿಗೆ ಮರಳಲು ಮುಂದಾಗಿದ್ದಾರೆ. ಈ ಮಧ್ಯೆ ರೈಲು ಸೇವೆಗಳಲ್ಲಿಯೂ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂಬ ಭೀತಿ ಜನರ ಮನದಲ್ಲಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಈ ಹೇಳಿಕೆ ನೀಡಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೈಲ್ವೇ ಮಂಡಳಿ ಅಧ್ಯಕ್ಷ ಸುನೀತ್ ಶರ್ಮ ‘ಅಗತ್ಯ ಬಿದ್ದರೆ ಹೆಚ್ಚುವರಿ ರೈಲುಗಳನ್ನೂ ಓಡಿಸಲು ನಾವು ಸಿದ್ಧ. ಬೇಡಿಕೆ ಹೆಚ್ಚಿದರೆ ಹೆಚ್ಚುವರಿ ರೈಲುಗಳನ್ನು ತಕ್ಷಣ ಓಡಿಸುತ್ತೇವೆ. ರೈಲುಗಳ ಕೊರತೆಯಿಲ್ಲ. ಕೊರೋನ ಸೋಂಕು ಪ್ರಕರಣ ಹೆಚ್ಚಿರುವ ಮಹಾರಾಷ್ಟ್ರದಲ್ಲೂ ಲೋಕಲ್ ರೈಲು ಸೇವೆ ಸೇರಿದಂತೆ ಯಾವುದೇ ರೈಲು ಸೇವೆ ಸ್ಥಗಿತಗೊಳಿಸಲು ರಾಜ್ಯ ಸರಕಾರದಿಂದ ಕೋರಿಕೆ ಬಂದಿಲ್ಲ’ ಎಂದು ಹೇಳಿದ್ದಾರೆ.

ಕೊರೋನ ಸೋಂಕಿನಿಂದಾಗಿ ಕಳೆದ ವರ್ಷದ ಮಾರ್ಚ್ 24ರಂದು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ ಸಂದರ್ಭ, ಮೊತ್ತಮೊದಲ ಬಾರಿಗೆ ಭಾರತೀಯ ರೈಲ್ವೇ ಇಲಾಖೆ ತನ್ನ ಎಲ್ಲಾ ಸೇವೆಗಳನ್ನೂ ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News