ಅರ್ನಬ್ ಗೋ ಸ್ವಾಮಿಗೆ ಮಧ್ಯಂತರ ಜಾಮೀನು ವಿಸ್ತರಣೆ

Update: 2021-04-09 17:27 GMT

ಹೊಸದಿಲ್ಲಿ,ಎ.9: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ನೀಡಲಾದ ಮಧ್ಯಂತರ ಜಾಮೀನನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಿಸ್ತರಿಸಿದೆ.

ಅಲಿಬಾಗ್ ಮೂಲದ ಒಳಾಂಗಣ ವಿನ್ಯಾಸಕ ಅನ್ವಯ್ ನಾಯಕ್ ಮೇ 2018ರಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಗೋಸ್ವಾಮಿ ಹಾಗೂ ಫಿರೋಝ್ ಶೇಖ್ ಮತ್ತು ನಿತೀಶ್ ಸರ್ಡಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ತಮ್ಮ ವಿರುದ್ಧ ಸಲ್ಲಿಸಿರುವ ದೋಷಾರೋಪಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಈ ಮೂವರು ಹೈಕೋರ್ಟ್ ಮೆಟ್ಟಲೇರಿದ್ದರು.ತಮಗೆ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಹಾಗೂ ಅಲಿಬಾಗ್ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರಾಗುವಂತೆ ವಿನಾಯಿತಿ ನೀಡುವಂತೆಯೂ ಕೋರಿದ್ದರು. ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಹಾಗೂ ಮನೀಶ್ ಪಿತಾಳೆ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 23ರಂದು ಅಲಿಸುವುದಾಗಿ ತಿಳಿಸಿತು.ಅದೇ ರೀತಿ ಮುಂದಿನ ಆದೇಶದವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಗುವುದೆಂದು ನ್ಯಾಯಾಲಯ ತಿಳಿಸಿತು.

ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗೋಸ್ವಾಮಿ ಹಾಗೂ ಇತರ ಇಬ್ಬರು ಆರೋಪಿಗಳನ್ನು 2020ರ ನವೆಂಬರ್ 4ರಂದು ಬಂಧಿಸಲಾಗಿತ್ತು.

 ಬಂಧನದ ಬಳಿಕ ಅವರು ಹೈಕೋರ್ಟ್‌ನಿಂದ ತುರ್ತು ಜಾಮೀನು ಕೋರಿ ಮನವಿ ಸಲ್ಲಿಸಿದ್ದರು.ಆದರೆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬಳಿಕ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಮೂವರೂ ಆರೋಪಿಗಳಿಗೂ ಸುಪ್ರೀಂಕೋರ್ಟ್ 2020ರ ನವೆಂಬರ್ 11ರಂದು ಮಧ್ಯಂತರ ಜಾಮೀನು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News