ಭಾರತೀಯರನ್ನು ವಿವಾಹವಾಗಿ ಡೈವೋರ್ಸ್ ನೀಡಿದ ವಿದೇಶಿಯರು ಒಸಿಐ ಸೌಲಭ್ಯಕ್ಕೆ ಅರ್ಹರಲ್ಲ: ಕೇಂದ್ರ ಸರಕಾರ

Update: 2021-04-09 17:32 GMT

ಹೊಸದಿಲ್ಲಿ, ಎ.9: ಭಾರತೀಯರನ್ನು ವಿವಾಹವಾಗಿ ಒಸಿಐ(ಭಾರತದ ಸಾಗರೋತ್ತರ ಪ್ರಜೆಗಳು) ಸ್ಥಾನಮಾನ ಪಡೆಯುವ ವಿದೇಶೀಯರು, ವಿಚ್ಛೇದನ ನೀಡಿದರೆ ಈ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಕೇಂದ್ರ ಸರಕಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.

ಬೆಲ್ಜಿಯಂನ ಮಹಿಳೆಯೊಬ್ಬರು 2006ರ ಆಗಸ್ಟ್ 21ರಂದು ಭಾರತದ ಪ್ರಜೆಯನ್ನು ವಿವಾಹವಾಗಿದ್ದರಿಂದ ‘ಪರ್ಸನ್ ಆಫ್ ಇಂಡಿಯನ್ ಒರಿಜಿನ್(ಭಾರತೀಯ ಮೂಲದ ವ್ಯಕ್ತಿ)- ಪಿಐಒ ಕಾರ್ಡ್ ಪಡೆದಿದ್ದರು. ಈ ಮಧ್ಯೆ, 2011ರಲ್ಲಿ ವಿವಾಹ ವಿಚ್ಛೇದನ ನೀಡಿದ ಮಹಿಳೆಗೆ ಪಿಐಒ ಕಾರ್ಡ್‌ನ ಆಧಾರದಲ್ಲಿ ಒಸಿಐ ಕಾರ್ಡ್ ನೀಡಲಾಗಿತ್ತು.

ಆದರೆ ಪೌರತ್ವ ಕಾಯ್ದೆಯ ಸೆಕ್ಷನ್ 7ಡಿ(ಎಫ್) ಪ್ರಕಾರ, ವಿವಾಹ ವಿಚ್ಛೇದನ ನೀಡಿದ ವಿದೇಶೀಯರು ಒಸಿಐ ಸ್ಥಾನಮಾನ ಕಳೆದುಕೊಳ್ಳುವುದರಿಂದ ಕಾರ್ಡ್ ಹಿಂತಿರುಗಿಸುವಂತೆ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿನ ಭಾರತೀಯ ದೂತಾವಾಸದ ಅಧಿಕಾರಿಗಳು ಸೂಚಿಸಿದ್ದರು. ಇದಕ್ಕೆ ಒಪ್ಪದ ಬೆಲ್ಜಿಯಂ ಮಹಿಳೆ ಕಾನೂನು ಸಮರಕ್ಕೆ ಮುಂದಾಗಿದ್ದರು. ಭಾರತ ಸರಕಾರ ಪಿಒಐ ಯೋಜನೆ ಮತ್ತು ಒಸಿಐ ಯೋಜನೆಯನ್ನು ವಿಲೀನಗೊಳಿಸಿದ ಸಂದರ್ಭ ತಾನು ಒಸಿಐ ಕಾರ್ಡ್ ಪಡೆದಿರುವುದರಿಂದ ಕಾಯ್ದೆಯ ನಿಯಮ ತನಗೆ ಅನ್ವಯಿಸುವುದಿಲ್ಲ ಎಂಬುದು ಮಹಿಳೆಯ ವಾದವಾಗಿದೆ. ಅಲ್ಲದೆ ತನಗೆ ಮಾಜಿ ಪತಿಯಿಂದ ಒಸಿಐ ಕಾರ್ಡ್ ಹೊಂದಿರುವ ಮಗಳೂ ಇದ್ದಾಳೆ ಮತ್ತು ಕೊರೋನ ಸೋಂಕಿನ ಕಾರಣದಿಂದ ತನಗೆ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗದೆ ಬೆಲ್ಜಿಯಂನಲ್ಲೇ ಉಳಿದುಕೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News