ಕಲ್ಲಾಪು: ಉದ್ಘಾಟನೆಗೆ ಸಜ್ಜುಗೊಂಡ ಗ್ಲೋಬಲ್ ಕಮರ್ಷಿಯಲ್ ಸೆಂಟರ್

Update: 2021-04-09 18:13 GMT

ಮಂಗಳೂರು, ಎ.9: ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಮಧ್ಯಮ ಮತ್ತು ಬಡ ವರ್ಗದ ಹಾಗೂ ಕೂಲಿ ಕಾರ್ಮಿಕರ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ರಖಂ ಮತ್ತು ಸಣ್ಣ ಪುಟ್ಟ ಚಿಲ್ಲರೆ ವ್ಯಾಪಾರಿಗಳ ಅನುಕೂಲಕ್ಕಾಗಿ ಮತ್ತು ಗ್ರಾಹಕ ಸ್ನೇಹಿ ವ್ಯವಸ್ಥೆಯಾಗಿ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ ಬಳಿ ಗ್ಲೋಬಲ್ ಕಮರ್ಷಿಯಲ್ ಸೆಂಟರ್ ಸ್ಥಾಪಿಸಲಾಗಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಗ್ಲೋಬಲ್ ಕಮರ್ಶಿಯಲ್ ಸೆಂಟರ್‌ನ ಪ್ರವರ್ತಕ ಅಬೂಬಕರ್ ಸಿದ್ಧೀಕ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಮಾರುಕಟ್ಟೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿಕ ಆತ್ಮ ನಿರ್ಭರ್ ಯೋಜನೆಗೆ ಪೂರಕವಾಗಿದೆ. ಕಲ್ಲಾಪು ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಒಟ್ಟು ಸುಮಾರು 5 ಎಕರೆ ವಿಶಾಲ ಪ್ರದೇಶದಲ್ಲಿ 1.5 ಎಕರೆ ಪ್ರದೇಶವನ್ನು ವ್ಯಾಪಾರೋದ್ಯಮಕ್ಕೆ ಬಳಸಲಾಗಿದೆ.ಅದರಲ್ಲಿ 247 ತಾತ್ಕಾಲಿಕ ಶೆಡ್ ರೂಪದ ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದು, ಹೊರ ಆವರಣದಲ್ಲಿ ರಖಂ ಮತ್ತು ಒಳಾಂಗಣದಲ್ಲಿ ಚಿಲ್ಲರೆ ಅಂಗಡಿಗಳನ್ನು ನಿರ್ಮಿಸಲಾಗಿದೆ. ಉಳಿದ ಭಾಗವನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ. ವ್ಯಾಪಾರಿಗಳಿಗೆ ಕೈಗೆಟುಕುವ ಬಾಡಿಗೆ ಆಧಾರದಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವಿಶಿಷ್ಟ ಮಾರುಕಟ್ಟೆಯಲ್ಲಿ ವಾಹನ ಚಾಲಕರಿಗೆ ವಿಶ್ರಾಂತಿ ಕೊಠಡಿ, ಒಂದು ಡಿಸ್ಸೆನ್ಸರಿ, ಒಡವರ ಬಂಧು ಮಾದರಿಯ ರಿಯಾಯಿತಿ ದರದ ಕ್ಯಾಂಟೀನ್, ಸ್ನಾನ ಗೃಹ, ಆಧುನಿಕ ಮಾದರಿಯ 30 ಶೌಚಾಲಯ ನಿರ್ಮಿಸಲಾಗುತ್ತಿದೆ. ಭದ್ರತೆ ದೃಷ್ಠಿಯಿಂದ ಸಿಸಿಟಿವಿ ಕ್ಯಾಮೆರಾ, ಎಂಟು ಮಂದಿ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಮಳಿಗೆಗೂ ವಿದ್ಯುತ್ ದೀಪ, ಸುತ್ತಲೂ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ನೆಲಕ್ಕೆ ಇಂಟರ್‌ಲಾಕ್ ಅಳವಡಿಸಲಾಗಿದೆ. ಎಟಿಎಂ ಸಹಿತ ಬ್ಯಾಂಕಿಂಗ್ ವ್ಯವಸ್ಥೆಗಾಗಿ ಬ್ಯಾಂಕ್ ಜೊತೆ ಮಾತುಕತೆ ನಡಸಲಾಗಿದೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ನಿರ್ಮಾಣವಾಗಿರುವ ಈ ಮಾರುಕಟ್ಟೆ ಹಣ್ಣು, ತರಕಾರಿಗೆ ಸಂಬಂಧಿಸಿದ ಚಿಲ್ಲರೆ, ರಖಂ ಮಾರುಕಟ್ಟೆಗಳ ಪೈಕಿ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿ ಅಭಿವೃದ್ಧಿ ಹೊಂದುವ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳದಲ್ಲೇ ಕಸ ಸಂಸ್ಕರಣೆಯ ಘಟಕ: ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಯಾವುದೇ ಕಸವನ್ನು ಹೊರಗೆ ಹಾಕುವುದಿಲ್ಲ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ತ್ಯಾಜ್ಯ ಸಂಸ್ಕರಣಾ ಘಟಕ( ಎಸ್‌ಟಿಪಿ) ಗಳನ್ನು ನಿರ್ಮಿಸಿದ್ದು, ಇಂಥ ಯೋಜನೆ ಬೇರಾವ ಮಾರುಕಟ್ಟೆಯಲ್ಲೂ ಕಾಣಲು ಸಿಗದು. ದಿನಕ್ಕೆರಡು ಬಾರಿ ಶುಚಿತ್ವ ಸ್ಯಾನಿಟೈಸೇಶನ್ ಮಾಡಲಾಗುತ್ತದೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಸುತ್ತ ಹಸಿರು ಗಿಡ ನೆಡುವ ಯೋಜನೆ ಇದೆ. ಕೊಯಮತ್ತೂರಿನ ಸಂಸ್ಥೆಯ ಘಟಕ ತ್ಯಾಜ್ಯ ಸಂಸ್ಕರಣೆಯನ್ನು ಸ್ಥಳದಲ್ಲಿಯೇ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.

3 ತಿಂಗಳಲ್ಲಿ ಪೂರ್ಣಗೊಂಡ ಯೋಜನೆ: ಕಲ್ಲಾಪುವಿನ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ಮಾರುಕಟ್ಟೆ ಕೇವಲ ಮೂರು ತಿಂಗಳಲ್ಲಿ ನಿರ್ಮಾಣವಾಗಿದೆ. ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಗ್ಲೋಬಲ್ ಕಮರ್ಷಿಯಲ್ ಸೆಂಟರ್‌ಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ನೋಡಿ ಇದೊಂದು ಮಾದರಿ ವ್ಯವಸ್ಥೆ ಎಂದು ಶ್ಲಾಘಿಸಿದ್ದಾರೆ. ಶಾಸಕ ಯು.ಟಿ.ಖಾದರ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಕೆ. ಭೇಟಿ ನೀಡಿ, ಯೋಜನೆ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಯೋಜನೆ ಪೂರ್ಣ ಗೊಳ್ಳಲು ಸಹಕಾರ ನೀಡಿದ್ದಾರೆ ಎಂದು ಅಬೂಬಕರ್ ಸಿದ್ದೀಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್, ಜಾಗದ ಮಾಲಕರಾದ (ಎಚ್‌ಎನ್‌ಜಿಸಿ) ಅಹ್ಮದ್ ಮನ್ಸೂರ್, ಪಿ.ಇಸ್ಮಾಯೀಲ್ ಅಹ್ಮದ್, ಇಬ್ರಾಹೀಂ, ಉಳ್ಳಾಲ ನಗರಸಭೆಯ ಸದಸ್ಯ ಆಸಿಫ್, ಮಾಜಿ ಸದಸ್ಯ ಉಸ್ಮಾನ್, ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News