ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ಸಾಧಕರಿಗೆ ಸನ್ಮಾನ

Update: 2021-04-10 09:29 GMT

ಮಂಗಳೂರು, ಎ.10: ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಸಾಧಕರು ಹಾಗ ದ.ಕ. ಜಿಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸಮುದಾಯದಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಡೆಯಿತು.

ನಗರದ ಬಾವುಟಗುಡ್ಡೆಯ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕ ಮುಹಮ್ಮದ್ ನಝೀರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಇನ್ನಷ್ಟು ಸಾಧನೆ ಮಾಡುವುದು ಹಾಗೂ ಜನಪ್ರತಿನಿಧಿಗಳು ತಮ್ಮ ಊರು, ಗ್ರಾಮದ ಅಭಿವೃದ್ಧಿ ಜತೆಗೆ ಸಾಮರಸ್ಯದ ಜೀವನಕ್ಕೆ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಹಾಗೂ ಸಾಗರೋತ್ತರದಲ್ಲಿ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಶೇ. 50ರಿಂದ 60ರಷ್ಟು ಕಡಿತವಾಗಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಅರಿವು ಯೋಜನೆಯೊಂದಕ್ಕೆ ವಾರ್ಷಿಕ 180 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಆದರೆ ಸರಕಾರದಿಂದ ದೊರಕಿರುವುದು 20 ಕೋಟಿ ರೂ. ಮಾತ್ರ. ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ ಅನುದಾನ ಕಡಿತಗೊಂಡಿದೆ. ಈ ಬಗ್ಗೆ ಬೇರೆ ಯೋಜನೆಗಳ ಅನುದಾನವನ್ನು ಹೊಂದಾಣಿಕೆ ಮಾಡಿಕೊಂಡು ನೆರವು ಮುಂದುವರಿಸುವಂತೆ ಸರಕಾರ ಸೂಚನೆ ನೀಡಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸರಕಾರದ ಉನ್ನತ ಹುದ್ದೆಯಲ್ಲಿರುವ ಮುಹಮ್ಮದ್ ನಝೀರ್, ಸಮಾಜ ಸೇವಕ ಹಾಗೂ ಉದ್ಯಮಿ ಡಾ.ಕೆ.ಎ.ಮುನೀರ್ ಬಾವ, ಪೊಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿ ಪದಕ ಪಡೆದಿರುವ ಅಬ್ದುಲ್ ಜಬ್ಬಾರ್, ಸಿಎಯನ್ನು ಪ್ರಥಮ ಬಾರಿಗೆ ಪೂರೈಸಿರುವ ಆಯಿಷಾ ಎಂ., ಸಮಾಜ ಸೇವಕಿ ಡಾ. ಸಂಶಾದ್ ಕುಂಜತ್ತಬೈಲ್, ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಸಿ. ಅಬ್ದುಲ್ ರೆಹಮಾನ್ ಸೇರಿದಂತೆ ವಿವಿಧ ಕ್ಷೇತ್ರದ ಸ್ಥಾಧಕರು ಹಾಗೂ ಸ್ಥಳೀಯ ಸಂಸ್ಥೆಗಳ ಬ್ಯಾರಿ ಸಮುದಾಯದ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಮತ್ತು ಎಜುಕೇಶನ್‌ನ ನಿರ್ದೇಶಕಿ ಡಾ.ರೀಟಾ ನೊರೊನ್ಹ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸಂಚಾಲಕ ರೇಷ್ಮಾ ಇಬ್ರಾಹೀಂ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಸ್ಥಾಪಕ ಅಧ್ಯಕ್ಷ ಜೆ. ಹುಸೇನ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಯದರ್ಶಿ ಇಬ್ರಾಹೀಂ ನಡುಪದವು, ಸಂಘಟನಾ ಕಾರ್ಯದರ್ಶಿ ಎಂ.ಎಸ್. ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಪರಿಷತ್‌ನ ಅಧ್ಯಕ್ಷ ಕೆ.ಎಸ್. ಅಬೂಬಕರ್ ಪಲ್ಲಮಜಲು ವಹಿಸಿದ್ದರು. ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಅಝೀಝ್ ಹಕ್ ಕಾರ್ಯಕ್ರಮ ನಿರೂಪಿಸಿದರು.


ಆಯಾ ಧರ್ಮದ ಚೌಕಟ್ಟನ್ನು ಒಪ್ಪಿ ಬದುಕುವುದೇ ಧರ್ಮ: ರೈ

ಪ್ರತಿ ಧರ್ಮವೂ ತನ್ನದೇ ಆದ ಚೌಕಟ್ಟನ್ನು ಹೊಂದಿದ್ದು, ಅದನ್ನು ಒಪ್ಪಿಕೊಂಡು ಇತರರ ಧರ್ಮವನ್ನು ಗೌರವಿಸಿ ಬದುಕುವುದೇ ಧರ್ಮ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಬ್ಯಾರಿ ಭಾಷೆ ಸುಂದರ ಭಾಷೆ ಎಂದರು. ದ.ಕ. ಜಿಲ್ಲೆಯು ಸಾಮಾಜಿಕ ಸಾಮರಸ್ಯಕ್ಕೆ ಹೆಸರುಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ದೃಷ್ಟಿಕೋನದಿಂದ ಧರ್ಮದ ಹೆಸರಿನಲ್ಲಿ ಧ್ರುವೀಕರಣಗೊಂಡು ಕೆಲವೊಂದು ಘಟನೆಗಳು ಜಿಲ್ಲೆಯ ಸಾಮರಸ್ಯದ ಜೀವನಕ್ಕೆ ಧಕ್ಕೆ ತಂದಿವೆ. ಆ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಕೆಲಸವನ್ನು ಬ್ಯಾರಿ ಪರಿಷತ್‌ನಂತಹ ಸಂಘಟನೆಗಳು ಮಾಡಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News