"ದೇವಭೂಮಿ ಉತ್ತರಾಖಂಡ್ ನಲ್ಲಿ 'ಲವ್ ಜಿಹಾದ್' ಪ್ರಕರಣ ಕಡಿಮೆಯಿದೆ, ಆದರೂ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ"

Update: 2021-04-10 10:41 GMT

ಹರಿದ್ವಾರ: ಉತ್ತರಾಖಂಡದಲ್ಲಿ ʼಲವ್ ಜಿಹಾದ್' ಕಡಿಮೆಯಿದೆ. ಆದರೂ ಇದರ ಕುರಿತು ತಮಗೆ ಕಳವಳವಿದೆ, ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ರಾಜ್ಯದ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಹೇಳಿದ್ದಾರೆ.

ಹರಿದ್ವಾರದಲ್ಲಿ ವಿಹಿಂಪ ಕೇಂದ್ರೀಯ ಮಾರ್ಗದರ್ಶಕ್ ಮಂಡಲ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಹಲವಾರು ಸಂತರು ಹಾಗೂ ಹಿರಿಯ ವಿಹಿಂಪ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಲವ್ ಜಿಹಾದ್ ವಿಚಾರ ವಿಸ್ತೃತವಾಗಿ ಚರ್ಚೆಯಾಗಿದೆಯೆಂದು ತಿಳಿದು ಬಂದಿದೆ.

ಲವ್ ಜಿಹಾದ್ ಕುರಿತು ತಾವು ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ್ದಾಗಿಯೂ ತಿಳಿಸಿದ ರಾವತ್ ಉತ್ತರಾಖಂಡ ʼದೇವಭೂಮಿ'ಯಾಗಿರುವುದರಿಂದ ಹಾಗೂ ಸಂತರ ಆಶೀರ್ವಾದವಿರುವ ಭೂಮಿಯಾಗಿರುವುದರಿಂದ ಅಲ್ಲಿ ಕಡಿಮೆ ʼಲವ್ ಜಿಹಾದ್' ಪ್ರಕರಣಗಳಿವೆ ಆದರೂ ನನಗೆ ಆತಂಕವಿದೆ. ನಾಲ್ಕು ದಿನಗಳ ಹಿಂದೆ ಸಭೆ ನಡೆಸಿ ಎಲ್ಲಾ ಜಿಲ್ಲೆಗಳಿಂದಲೂ  ವರದಿ ತರಿಸಿದ್ದೇನೆ, ಈ ಸಮಸ್ಯೆ ನಿವಾರಣೆಗೆ ಖಂಡಿತ ಕ್ರಮ ಕೈಗೊಳ್ಳುತ್ತೇನೆ" ಎಂದರು.

ಸಭೆಯಲ್ಲಿ ಮಾತನಾಡಿದ ಚಿತ್ರಕೂಟದ ರಾಮಚಂದ್ರ ದಾಸ್, ʼಲವ್ ಜಿಹಾದ್' ಒಂದು ಸಂಚು ಎಂದರಲ್ಲದೆ ಒಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಪ್ರಸಾರವಾಗುವ ಕೆಲ ವೆಬ್ ಸರಣಿಗಳು ಧಾರ್ಮಿಕ ಸ್ಥಳಗಳು ಮತ್ತು ಸಂತರ ವಿರುದ್ಧ ಸಂಚು ನಡೆಸುತ್ತಿವೆ ಎಂದು ಆರೋಪಿಸಿದರು.

 ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದು ದೇವಳಗಳು ಮತ್ತು ಆರಾಧನಾಲಯಗಳನ್ನು ತಮ್ಮ ನೇರ ಹಿಡಿತದಿಂದ ಬಿಡುಗಡೆಗೊಳಿಸಬೇಕೆಂದು ಸಭೆಯಲ್ಲಿ ವಿಹಿಂಪ  ನಿರ್ಣಯ ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News