ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಕೊರೋನ ಪಾಸಿಟಿವ್‌

Update: 2021-04-10 15:18 GMT

ಮಂಗಳೂರು/ಉಡುಪಿ,ಎ.10: ರಾಜ್ಯ ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೋವಿಡ್-19 ಪಾಸಿಟಿವ್ ಕಾರಣಕ್ಕೆ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಅನಿವಾರ್ಯವಾದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು. ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಕೇರಳ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲವು ದಿನಗಳ ಹಿಂದೆ ಊರಿಗೆ ಬಂದಿದ್ದ ಸಚಿವರು, ಎ.7ರಂದು ಮಂಗಳೂರಿನಲ್ಲಿ ಸಚಿವ ಈಶ್ವರಪ್ಪ ಅವರ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ಎ.8ರಂದು ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಧರ್ಮ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಅಂದರೆ ಎ.9ರಂದು ಸಚಿವರು ತೀವ್ರ ಜ್ವರದಿಂದ ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಶನಿವಾರ ಅವರ ಕೋವಿಡ್ ವರದಿಯು ಪಾಸಿಟಿವ್ ಆಗಿರುವುದು ದೃಢಪಟ್ಟಿವೆ.

ಧರ್ಮನೇಮೋತ್ಸವದಲ್ಲಿ ಸಚಿವರಾದ ಈಶ್ವರಪ್ಪ, ಎಸ್. ಅಂಗಾರ, ಸಂಸದರಾದ ಶೋಭಾ ಕರಂದ್ಲಾಜೆ, ಡಿ.ಕೆ.ಸುರೇಶ್, ಪ್ರತಾಪ ಸಿಂಹ, ಅಣ್ಣಾ ಸಾಹೇಬ್ ಜೊಲ್ಲೆ, ಗದ್ದಿಗೌಡರ್, ಭಗವಂತ ಖೂಬಾ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ವಿಧಾನಪರಿಷತ್ ಸದಸ್ಯ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಾಣಿಲ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕಾ ಉಳೆಪಾಡಿಗುತ್ತು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎಸ್ಪಿ ಋಷಿಕೇಶ್ ಸೋನಾವನೆ ಮತ್ತಿತರರು ಪಾಲ್ಗೊಂಡಿದ್ದರು. ಎ.7ರಂದು ನಡೆದ ಸುದ್ದಿಗೋಷ್ಠಿಯಲ್ಲಿ ನಗರದ ಬಹುತೇಕ ಪತ್ರಕರ್ತರು ಕೂಡ ಹಾಜರಿದ್ದರು.

ಇದೀಗ ಉಸ್ತುವಾರಿ ಸಚಿವರಿಗೆ ಕೊರೋನ ಪಾಸಿಟಿವ್ ದೃಢಗೊಳ್ಳುವುದರೊಂದಿಗೆ ಸುದ್ದಿಗೋಷ್ಠಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಕ್ವಾರಂಟೈನ್‌ಗೊಳಗಾಗುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News