ಸಮಾಜದ ಒಳಿತಿಗಾಗಿ ಸಾಮೂಹಿಕ ಪ್ರಯತ್ನ ಅಗತ್ಯ: ಡಾ.ಸುಧಾ ಮೂರ್ತಿ

Update: 2021-04-10 11:48 GMT

ಮಂಗಳೂರು, ಎ.10: ಸಮಾಜದ ಒಳಿತಿಗಾಗಿ ಸಾಮೂಹಿಕವಾದ ಪ್ರಯತ್ನ ಅಗತ್ಯವಿದೆ. ನಾವು ಗಳಿಸಿರುವುದರಲ್ಲಿ ಒಂದು ಪಾಲನ್ನು ಸಮಾಜಕ್ಕೂ ನೀಡುತ್ತಾ ಬೆಳೆಯಿರಿ ಎಂದು ಇನ್ಫೋಸೀಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಯುವ ಪದವೀಧರರಿಗೆ ಕರೆ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿಂದು ಜರುಗಿದ ವಿವಿಯ 39ನೇ ಘಟಿಕೋತ್ಸವದಲ್ಲಿ ವರ್ಚುವಲ್ ವೇದಿಕೆಯ ಮೂಲಕ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಸಾಮೂಹಿಕ ಪ್ರಯತ್ನಕ್ಕೆ ಕ್ರಿಕೆಟ್ ಉತ್ತಮ ಉದಾಹರಣೆ. ಕ್ರಿಕೆಟ್ ತಂಡದಲ್ಲಿ ಎಲ್ಲರ ಉತ್ತಮ ಆಟ ಗೆಲುವಿಗೆ ಕಾರಣವಾಗುತ್ತದೆ. ಅದೇರೀತಿ ಒಬ್ಬನ ಕಳಪೆ ಆಟದಿಂದ ಇಡೀ ತಂಡವೇ ಸೋಲನುಭವಿಸಬಹುದು. ಈ ಹಿನ್ನೆಲೆಯಲ್ಲಿ ಸಮಾಜದ ಏಳಿಗೆಗೆ ಸಂಪತ್ತು ಉಳ್ಳವರು ಇಲ್ಲದ ಬಡವರಿಗೆ ಒಂದು ಪಾಲು ನೀಡುವ ಮೂಲಕ  ಮಾನವೀಯ ಸಮಾಜದ ಒಳಿತಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಜ್ಞಾನ ಅತ್ಯಂತ ಅಮೂಲ್ಯವಾದ ಸಂಪತ್ತು .ಈ ಸಂಪತ್ತನ್ನು ಪಡೆದ ಸಂಸ್ಥೆಯ ಋಣ ತೀರಿಸಬೇಕಾದರೆ ನಮ್ಮ ಸಂಪಾದನೆಯಲ್ಲಿ ಒಂದು ಪಾಲನ್ನು ಆ ಕ್ಷೇತ್ರಕ್ಕೆ ವಿನಿಯೋಗಿಸಬೇಕು. ಆಗ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯ ಋಣ ಸಂದಾಯ ಮಾಡಿದಂತಾಗುತ್ತದೆ ಎಂದು ಡಾ.ಸುಧಾಮೂರ್ತಿ ನುಡಿದರು.

ಅಕಾಡಮಿ ಪದವಿ ಪಡೆದಾಗ ಶಿಕ್ಷಣ ಪೂರ್ಣಗೊಂಡಿದೆ ಎಂದು ಭಾವಿಸಬಾರದು. ನಿಜವಾದ ಶಿಕ್ಷಣ ಪದವಿ ಪಡೆದು ಅಲ್ಲಿಂದ ಹೊರಬಂದ ಬಳಿಕ ಆರಂಭವಾಗುತ್ತದೆ. ಸಮಾಜದಲ್ಲಿ ಯುವ ಪದವೀಧರರು ತಮ್ಮ ಬದುಕಿಗೆ ಬೇಕಾದ ಸಾಕಷ್ಟು ಮೌಲ್ಯಗಳನ್ನು ಕಲಿಯಬೇಕಾಗುತ್ತದೆ ಎಂದು ಸುಧಾ ಮೂರ್ತಿ ಕಿವಿಮಾತು ತಿಳಿಸಿದ್ದಾರೆ.

ಜೀವನದಲ್ಲಿ ಸಮಸ್ಯೆಗಳಿಗೆ ಎದೆಗುಂದದೆ ಮುನ್ನಡೆಯಬೇಕು. ಬದುಕಿನಲ್ಲಿ ಸೋಲು ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ .ಗುರಿ ಸಾಧನೆಗೆ ಈ ದಾರಿಗಳಲ್ಲದೆ ಬೇರೆ ಪರ್ಯಾಯಗಳಿಲ್ಲ. ನಾನು ನನ್ನ ಬದುಕಿನಲ್ಲಿ ಸಮಸ್ಯೆ ಗಳು, ಕಷ್ಟಗಳ ದಾರಿಯಲ್ಲಿಯೇ ಮೇಲೇರಿ ಬಂದಿದ್ದೇನೆ  ಎಂದು ಸುಧಾಮೂರ್ತಿ ತಮ್ಮ ಅನುಭವನ್ನು ಹಂಚಿಕೊಂಡು ಪ್ರೋತ್ಸಾಹ ದ ಮಾತುಗಳನ್ನಾಡಿದರು.

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಘಟಿಕೋತ್ಸವದ ವರದಿ ನೀಡಿ ಅತಿಥಿಗಳನ್ನು ಪರಿಚಯಿಸಿದರು. ಕುಲಾಧಿಪತಿಯಾಗಿರುವ ರಾಜ್ಯಪಾಲರು, ಸಹ ಕುಲಾಧಿಪತಿಯಾಗಿರುವ ಶಿಕ್ಷಣ ಸಚಿವರು ಸಮಾರಂಭಕ್ಕೆ ಗೈರಾಗಿದ್ದರು.

ಸಮಾರಂಭದಲ್ಲಿ 117 ಮಂದಿಗೆ ಪಿಎಚ್‌ಡಿ ಪದವಿ, 10 ಮಂದಿಗೆ ಚಿನ್ನದ ಪದಕ ಮತ್ತು ವಿವಿಧ ಕೋರ್ಸ್‌ಗಳಲ್ಲಿ 188 ಮಂದಿ ರ್ಯಾಂಕ್‌ ಪಡೆದಿದ್ದು ಪ್ರಥಮ ರ್ಯಾಂಕ್ ಪಡೆದ 69 ಮಂದಿಗೆ ಸೀಮಿತ ಸಂಖ್ಯೆಯ ಸಭಿಕರ ಉಪಸ್ಥಿತಿಯಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ವಿವಿ ಸಿಂಡಿಕೇಟ್, ಅಕಾಡಮಿ ಕೌನ್ಸಿಲ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೊ.ರವಿಶಂಕರ್, ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News