ಕರ್ನಾಟಕ ಕ್ರೀಡಾರತ್ನ ಪುರಸ್ಕೃತೆ ಜಯಲಕ್ಮೀಗೆ ಪ್ರಥಮ ರ್ಯಾಂಕ್

Update: 2021-04-10 12:05 GMT

ಕೊಣಾಜೆ: ಕರ್ನಾಟಕ ಬಾಲ್ ಬ್ಯಾಟ್ಮಿಂಟನ್ ಕ್ಷೇತ್ರದ ಸಾಧಕಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮೀ ಅವರು ಕ್ರೀಡೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆ ಮಾಡುವುದರೊಂದಿಗೆ ಮಂಗಳೂರು ವಿವಿಯ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಮಿಂಚಿದ್ದಾರೆ.

ಬಂಟ್ವಾಳದ ಕಡೇಶಿವಾಲಯದ ದಿ.ವಿಶ್ವನಾಥ ಹಾಗೂ ರೇವತಿ ದಂಪತಿಯ ಪುತ್ರಿ ಜಯಲಕ್ಷ್ಮೀ ಸಣ್ಣಂದಿನಿಂದಲೇ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಬಂದಿದ್ದರು. ಇದರಿಂದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ವಿಭಾಗದಲ್ಲಿ ಕ್ರೀಡಾಕೋಟದಡಿಯಲ್ಲಿ ಸೀಟ್ ದೊರೆತು ಪಿಯುಸಿಯಿಂದ ಎಂಕಾಂವರೆಗೆ ಮಾಡಿ ಬಳಿಕ ಅಲ್ಲೇ ಪಿಜಿಡಿಬಿಎಂ(ಪೋಸ್ಟ್ ಗ್ರಾಜ್ಯುವೇಶನ್ ಡಿಪ್ಲೋಮಾ ಇನ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್) ಮಾಡಿದ್ದರು.  ಈ ಅವಧಿಯಲ್ಲಿ ಶಿಕ್ಷಣದೊಂದಿಗೆ ಕ್ರೀಡಾ ಅವಕಾಶವನ್ನು ಸದ್ಭಳಕೆ ಮಾಡಿಕೊಂಡ ಜಯಲಕ್ಷ್ಮೀ ರಾಷ್ಟ್ರೀಯ ಮಟ್ಟದ ಅಂತರ ವಿವಿ ಬಾಲ್ ಬ್ಯಾಟ್ಮಿಂಟನ್ ಸ್ಪರ್ಧೆಯಲ್ಲಿ ಆರು ಬಾರಿ ಚಿನ್ನದಪದಕ ಪಡೆದಿದ್ದು, ನಾಲ್ಕು ಬಾರಿ ಕರ್ನಾಟಕ ರಾಜ್ಯ ತಂಡ ಕ್ಯಾಪ್ಟನ್ ಆಗಿ ಸಾಧನೆ ಮಾಡಿದ್ದರು. ಅಲ್ಲದೆ ನಾಲ್ಲು ರಾಷ್ಟ್ರೀಯ ಮಟ್ಟದ ಅವಾರ್ಡ್ ಪಡೆದುಕೊಂಡಿದ್ದರು.  ಇವರ ಸಾಧನೆಗೆ ಕರ್ನಾಟಕ ಸರ್ಕಾರ 2020ರಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದಿರುವ ಜಯಲಕ್ಷ್ಮೀ ಅವರು ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸಾಧಕಿಯಾಗಿ ಹೊರಹೊಮ್ಮಿದ್ದು ಪಿಜಿಡಿಬಿಎಂನಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಮಿಂಚಿದ್ದಾರೆ.

ಶನಿವಾರ ಮಂಗಳೂರು ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಪದವಿ ಪಡೆದುಕೊಂಡರು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಯಲಕ್ಷ್ಮೀ ಅವರು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬುದು ನನ್ನ ಕನಸಾಗಿದೆ ಎಂದು ಸಂತಸವನ್ನು ಹಂಚಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News