ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ದ.ಕ. ಜಿಲ್ಲಾಧಿಕಾರಿ ಕರೆ

Update: 2021-04-10 14:05 GMT

ಮಂಗಳೂರು, ಎ.10: ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣ ಹೆಚ್ಚಾಗುತ್ತಿದೆ. ಅದರ ನಿಯಂತ್ರಣಕ್ಕೆ ಸರಕಾರ ಹೊರಡಿಸುವ ಮಾರ್ಗಸೂಚಿಗಳ ಸಹಿತ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಮದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ. ಕರೆ ನೀಡಿದ್ದಾರೆ.

ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಸರಕಾರ ಹೊಸ ಹೊಸ ಮಾರ್ಗಸೂಚಿಗಳನ್ನು ಆಗಾಗ ಹೊರಡಿಸುತ್ತಿದೆ. ಜಿಲ್ಲೆಯ ಸಾರ್ವಜನಿಕರು ಅವುಗಳನ್ನು ಪಾಲಿಸುವುದರೊಂದಿಗೆ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಡಿಸಿ ಮನವಿ ಮಾಡಿದರು.

ಆರೋಗ್ಯ ಇಲಾಖೆಯವರು ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದರೊಂದಿಗೆ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡಬೇಕು. ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದ ಡಿಸಿ ಕೊರೋನ ಕರ್ಫ್ಯೂ ನಿಯಮಗಳ ಸಹಿತ ಸುರಕ್ಷಿತ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಅವುಗಳನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಪತ್ತು ನಿರ್ವಹಣೆ ಕಾಯ್ದೆಯ ಅನ್ವಯ ಕೊರೋನ ಕರ್ಫ್ಯೂವನ್ನು ಎ.20ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಗೊಳಿಸಲಾಗಿದೆ. ಈ ಸಂದರ್ಭ ಕೆಲವು ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿಸಲಾಗಿದೆ. ಉಳಿದಂತೆ ಎಲ್ಲ ಸೇವೆ ಹಾಗೂ ಸಂಚಾರಗಳನ್ನು ನಿಷೇಧಿಸಲಾಗಿದೆ ಎಂದರು.

ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿಸಿದೆ. ದೂರ ಸಂಪರ್ಕ ಮತ್ತು ಅಂತರ್ಜಾಲ ಸೇವೆ ಸಂಸ್ಥೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಸಂಸ್ಥೆಗಳ ಸಿಬ್ಬಂದಿ ವರ್ಗ ರಾತ್ರಿ ಪಾಳಿಯಲ್ಲಿ ಕಚೇರಿ ಗುರುತಿನ ಚೀಟಿ ಹೊಂದಿ ಸಂಚರಿಸಬಹುದು ಎಂದರು.

ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು, ಕಂಪೆನಿಗಳು ಹಾಗೂ ಸಂಸ್ಥೆಗಳು ಈ ಹಿಂದಿನಂತೆ ಕಾರ್ಯನಿರ್ವಹಿಸಲು ಅನುಮತಿಸಿದೆ. ಕಾರ್ಮಿಕರು ಹಾಗೂ ನೌಕರರು ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರಬೇಕು. ರಾತ್ರಿ ವೇಳೆಯಲ್ಲಿನ ಬಸ್, ರೈಲು,ವಿಮಾನದಲ್ಲಿ ದೂರ ಪ್ರಯಾಣಕ್ಕೆ ಅನುಮತಿಸಲಾಗಿದೆ. ಪ್ರಯಾಣಿಕರು ಅಧಿಕೃತ ಟಿಕೆಟ್‌ಗಳನ್ನು ತೋರಿಸಿ ಸಂಚರಿಸಬಹುದು ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪಿಡಿಒ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಸೋಂಕಿತ ವ್ಯಕ್ತಿಗಳು ಹೋಂ ಐಸೋಲೇಶನ್‌ನಲ್ಲಿರುವಾಗ ಅವರ ಮೇಲೆ ನಿಗಾ ವಹಿಸಬೇಕು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಕೋವಿಡ್ ರೋಗನಿರೋಧಕ ಲಸಿಕೆಯನ್ನು ಪಡೆದುಕೊಳ್ಳುವಂತೆ ಸೂಚಿಸಬೇಕು ಎಂದ ಡಿಸಿ, ಕೋವಿಡ್ ಸಂಬಂಧಿತ ಜನಜಾಗೃತಿ ಕಾರ್ಯಕ್ರಮ ಹಾಗೂ ಬೀದಿನಾಟಕಗಳ ಮೂಲಕ ಜನರಿಗೆ ಅರಿವು ಮೂಡಿಸಬೇಕು ಎಂದರು.

ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಪೂರಕ ಔಷಧಿ ಸಹಿತ ಮತ್ತಿತರ ಉಪಕರಣಗಳನ್ನು ಕೊರತೆಯಾಗದಂತೆ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದ ಡಿಸಿ, ಜಿಲ್ಲೆಯ ಚೆಕ್‌ಪೋಸ್ಟ್ಗಳಲ್ಲಿ ಇಬ್ಬರು ಹೋಂ ಗಾರ್ಡ್‌ಗಳನ್ನು ನಿಯೋಜಿಸಿ ಬೇರೆ ರಾಜ್ಯ, ಜಿಲ್ಲೆಗಳಿಂದ ಈ ಜಿಲ್ಲೆಗೆ ಬರುವ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ವರದಿ ತರುವಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ, ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News