ಜಲಶಕ್ತಿ ಅಭಿಯಾನ: ಪ್ರತಿ ಗ್ರಾ.ಪಂ.ನಲ್ಲಿ ಕನಿಷ್ಠ ಒಂದು ಕೆರೆಯ ಅಭಿವೃದ್ಧಿ

Update: 2021-04-10 13:22 GMT

ಉಡುಪಿ, ಎ.10: ಕೇಂದ್ರ ಸರಕಾರ ಮಾ.22ರಿಂದ ನವೆಂಬರ್ 30ರವರೆಗೆ ದೇಶಾದ್ಯಂತ ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ದೇಶನ ನೀಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಈ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ.

ಮುಂಗಾರು ಪೂರ್ವದ 100 ದಿನಗಳ ಅವಧಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ. ಮಹಾತ್ಮಗಾಂಧಿ ನರೇನಾ ಯೋಜನೆಯನ್ನು ಬಳಸಿಕೊಂಡು ಪ್ರತಿ ಗ್ರಾಪಂನಲ್ಲಿ ಜಲಶಕ್ತಿ ಅಭಿಯಾನವನ್ನು ನಡೆಸಬಹುದಾಗಿದ್ದು, ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.

ಇದರಂತೆ ಪ್ರತಿ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಕೆರೆ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿ, ನೀರು ಹರಿದುಹೋಗುವ ನಾಲಾ/ಕಾಲುವೆಗಳ ಪುನಶ್ಚೇತನ, ಹೊಸಕೆರೆ, ಗೋಕಟ್ಟೆಗಳ ನಿರ್ಮಾಣ, ಕಿಂಡಿ ಅಣೆಕಟ್ಟು, ಬೋರ್‌ವೆಲ್ ರಿಚಾರ್ಜ್, ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿ ಇತ್ಯಾದಿ ಸಮುದಾಯ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.

ಅಲ್ಲದೇ ನೀರಾವರಿ ಬಾವಿ ನಿರ್ಮಾಣ, ಸೋಕ್‌ಪಿಟ್‌ಗಳ ನಿರ್ಮಾಣ, ಬದುಗಳ ನಿರ್ಮಾಣ, ಕೃಷಿ ಹೊಂಡ ಮೊದಲಾದ ವೈಯಕ್ತಿಕ ಕಾರ್ಯಕ್ರಮಗಳನ್ನು ಸಹ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯಡಿ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗ್ರಾಮಕ್ಕೊಂದು ಕೆರೆ ಅಭಿವೃದ್ಧಿ: ಜಲಶಕ್ತಿ ಅಭಿಯಾನದ ಅಂಗವಾಗಿ ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಕೆರೆಯನ್ನು ಗುರುತಿಸಿ ಅದರ ಸಮಗ್ರ ಅಭಿವೃದ್ಧಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 141 ಕೆರೆ, 160 ಕಾಲುವೆ/ತೋಡು ಹೂಳೆತ್ತುವುದು, 20 ಕಿಂಡಿ ಅಣೆಕಟ್ಟು ನಿರ್ಮಾಣ, 50 ಬೋರ್‌ವೆಲ್‌ಗಳ ರಿಚಾರ್ಜ್, 1455 ನೀರಾವರಿ ಬಾವಿಗಳ ನಿರ್ಮಾಣದ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅಲ್ಲದೇ ಪ್ರತಿ ಗ್ರಾಪಂನಲ್ಲಿ ಕನಿಷ್ಠ ಒಂದು ಕಟ್ಟಡಕ್ಕೆ ಮಳೆ ನೀರು ಕೊಯ್ಲು ಕಾಮಗಾರಿ ನಿರ್ವಹಿಸುವಂತೆ, ಪ್ರತಿ ಗ್ರಾಪಂಗೆ ಕನಿಷ್ಠ 50 ಸೋಕ್‌ಪಿಚ್ ನಿರ್ಮಿಸುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನರೇಗಾ ಕಾರ್ಯಕ್ರಮದ ಕೂಲಿದರವನ್ನು ಕೇಂದ್ರ ಸರಕಾರ ಹೆಚ್ಚಿಸಿದೆ. 275 ರೂ.ವಿದ್ದ ಕೂಲಿ ದರವನ್ನು 289ರೂ.ಗಳಿಗೆ ಹೆಚ್ಚಿಸಲಾಗಿದೆ. ವರ್ಷಕ್ಕೆ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಅಭಿಯಾನ ಜಾರಿಯಲ್ಲಿದ್ದು, ಉದ್ಯೋಗ ಚೀಟಿ ಹೊಂದದ ಕುಟುಂಬಗಳು ಗ್ರಾಪಂನ್ನು ಸಂಪರ್ಕಿಸಿ ಉದ್ಯೋಗ ಚೀಟಿ ಪಡೆದು ಗ್ರಾಪಂನಿಂದ ನರೇಗಾದಲ್ಲಿ ಕೂಲಿ ಉದ್ಯೋಗ ಪಡೆಯಬಹುದಾಗಿದೆ.

ಉಡುಪಿ ಜಿಲ್ಲೆಯಲ್ಲಿ ನರೇಗಾ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಲಾ ರಂಭಿಸಿದ್ದು, 2020-21ನೇ ಸಾಲಿನಲ್ಲಿ 6.68 ಲಕ್ಷ ರೂ. ಮಾನವದಿನಗಳ ಸೃಜನೆ ಮಾಡಲಾಗಿದೆ. ಇದರಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಒಟ್ಟು 7,687 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಸಿಇಓ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನರೇಗಾ ಯೋಜನೆಯನ್ನು ಹೊರತುಪಡಿಸಿಯೂ ಅಂತರ್ಜಲ ಮರುಪೂರಣಗೊಳಿಸುವ ಕಾರ್ಯಕ್ರಮದಲ್ಲಿ ಸ್ವಇಚ್ಛೆಯಿಂದಲೂ ಭಾಗವಹಿಸಬಹುದಾಗಿದೆ.ಕೆರೆ ಅಭಿವೃದ್ಧಿ, ಅರಣ್ಯೀಕರಣ ಮೊದಲಾದ ಸಮುದಾಯ ಕಾರ್ಯಕ್ರಮಗಳೊಂದಿಗೆ ಸ್ವಂತ ಮನೆಗಳಲ್ಲಿ ಮಳೆ ನೀರು ಕೊಯ್ಲು, ನೀರು ಇಂಗಿಸುವಿಕೆ, ಸೋಕ್‌ಪಿಟ್ ನಿರ್ಮಾಣಗಳನ್ನು ಸ್ವಂತವಾಗಿ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574945ನ್ನು ಅಥವಾ ಸಮೀಪದ ಗ್ರಾಪಂ ಕಚೇರಿಯನ್ನು ಸಂಕರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News