ಉಡುಪಿ: ಮಾರ್ಪಳ್ಳಿ ಸರಣಿ ಕಳವು ಪ್ರಕರಣ; ಆರೋಪಿಯ ಬಂಧನ

Update: 2021-04-10 14:37 GMT

ಉಡುಪಿ, ಎ.10: ನಾಲ್ಕು ದಿನಗಳ ಹಿಂದೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಳ್ಳಿ ಎಂಬಲ್ಲಿ ನಡೆದ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಜಾಪುರ ಜಿಲ್ಲೆಯ ರಮೇಶ್ ಹುಲುಗಪ್ಪ ವಡ್ಡರ(35) ಬಂಧಿತ ಆರೋಪಿ. ಎ.6ರಂದು ಕೊರಂಗ್ರಪಾಡಿ ಗ್ರಾಮ ಮಾರ್ಪಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಚೆನ್ನಮ್ಮ ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ಮೊಬೈಲ್, ಮಾರ್ಪಳ್ಳಿ ಬಬ್ಬುಸ್ವಾಮಿ ದೈವಸ್ಥಾನದಿಂದ ಕಾಣಿಕೆ ಡಬ್ಬ ಮತ್ತು ಮಾರ್ಪಳ್ಳಿಯ ಮಾನಸ ಜನರಲ್ ಸ್ಟೋರ್‌ನಿಂದ ನಗದು ಕಳವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆರೋಪಿಯನ್ನು ಎ.10ರಂದು ಬೆಳಗ್ಗೆ ನಗರದ ಸಿಟಿಬಸ್ ನಿಲ್ದಾಣದಲ್ಲಿ ಬಂಧಿಸಿತು. ಈತನಿಂದ ಮಾರ್ಪಳ್ಳಿ ಪರಿಸರದಲ್ಲಿ ಕಳವು ಮಾಡಿದ್ದ 5ಗ್ರಾಂ ತೂಕದ ಚಿನ್ನದ ಸರ, ಎರಡು ಮೊಬೈಲ್, ಕಾಣಿಕೆ ಡಬ್ಬಿಯಲ್ಲಿದ್ದ ಹಣ ಹಾಗೂ ನಗದು ಮತ್ತು ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಸಚಿನ್ ತಲೆಮರೆಸಿಕೊಂಡಿದ್ದು, ಇವರಿಬ್ಬರು ಉಡುಪಿ ಹಾಗೂ ಇತರ ಜಿಲ್ಲೆಗಳ ಪೊಲೀಸ್ ಠಾಣೆಗಳ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಕೊಳ್ಳಲಾಗಿದೆ.

ಎಸ್ಪಿ ವಿಷ್ಣುವರ್ಧನ್ ಆದೇಶದಂತೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕಿ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ನಗರ ಠಾಣಾ ಎಸ್ಸೈ ಸಕ್ತಿವೇಲು, ಅಪರಾಧ ಶಾಖೆಯ ಎಸ್ಸೈ ವಾಸಪ್ಪ ನಾಯ್ಕ್, ಪ್ರೊಬೇಷನರಿ ಎಸ್ಸೈ ಅನಿಲ್ ಮತ್ತು ಅಶೋಕ್ ಹಾಗೂ ಸಿಬ್ಬಂದಿಗಳಾದ ಜೀವನ್, ಲೋಕೇಶ್, ರಾಜೇಶ್, ಇಮ್ರಾನ್, ಚೇತನ್, ಸಂತೋಷ್ ರಾಠೋಡ್ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News