ಶಿರ್ವ ಪೊಲೀಸರಿಂದ ದೌರ್ಜನ್ಯ ಆರೋಪ: ಟೆಂಪೋ ಚಾಲಕ ಆಸ್ಪತ್ರೆಗೆ ದಾಖಲು

Update: 2021-04-10 15:26 GMT

ಉಡುಪಿ, ಎ.10: ಶಿರ್ವ ಎಸ್ಸೈ ಸೇರಿದಂತೆ ನಾಲ್ವರು ಪೊಲೀಸರು ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಜಲ್ಲಿ ಸಾಗಾಟ ಮಾಡುವ ಟೆಂಪೋ ಚಾಲಕ ಹಿರಿಯಡ್ಕದ ಕೊಂಡಾಡಿ ನಿವಾಸಿ ಶೇಖರ ಪೂಜಾರಿ(64) ಎಂಬವರು ಉಡುಪಿ ಜಿಲ್ಲಾ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶೇಖರ ಪೂಜಾರಿ, "ಪಳ್ಳಿಯಿಂದ ಉಡುಪಿ ಕಡೆ ಜಲ್ಲಿ ಸಾಗಿಸುತ್ತಿದ್ದ ನನ್ನ ಟೆಂಪೋವನ್ನು ಎ.9ರಂದು ಸಂಜೆ 7 ಗಂಟೆ ಸುಮಾರಿಗೆ ಮೂಡುಬೆಳ್ಳೆಯಲ್ಲಿ ಶಿರ್ವ ಎಸ್ಸೈ ಸೇರಿದಂತೆ ನಾಲ್ವರು ಪೊಲೀಸರು ತಡೆದು ನಿಲ್ಲಿಸಿದರು. ದಂಡ ಕಟ್ಟುವಂತೆ ಸೂಚಿಸಿದರು. ಇಲ್ಲದಿದ್ದರೆ ಟೆಂಪೋವನ್ನು ಠಾಣೆಗೆ ತೆಗೆದುಕೊಂಡು ಬರುವಂತೆ ಬೆದರಿಸಿದರು" ಎಂದು ದೂರಿದರು.

"ಆದರೆ ನನ್ನಲ್ಲಿ ನಯಾ ಪೈಸೆ ಇರಲಿಲ್ಲ. ನಾನು ಸಾಹುಕಾರಿಗೆ ಕರೆ ಮಾಡಿದೆ. ಅವರು ಅಲ್ಲೇ ಇರುವ ಅಂಗಡಿಯಿಂದ ಹಣ ತೆಗೆದುಕೊಡುವಂತೆ ತಿಳಿಸಿದರು. ಹಾಗೆ ಮಾಡಿದಾಗ ಎಸ್ಸೈ, ನನ್ನ ಕಪಾಳಕ್ಕೆ ಹೊಡೆದರು. ನನ್ನ ಹತ್ತಿರ ಕೊಡಲಿಕ್ಕೆ ಹಣ ಇಲ್ಲ ಎಂದು ಹೇಳಿ ನಾನು ಪೊಲೀಸ್ ಜೀಪಿನ ಮುಂದೆ ಮಲಗಿ, ನನ್ನನ್ನು ಸಾಯಿಸಿ ಎಂದು ಹೇಳಿದೆ. ಆದರೂ ಬಿಡದ ಅವರು, ನನ್ನನ್ನು ಜೀಪಿಗೆ ಹಾಕಿದರು" ಎಂದು ಅವರು ಆರೋಪಿಸಿದರು.

ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ಮನೆಯ ಸಮೀಪ ಕೋಲ ಇದೆ ಎಂದು ಪರಿಪರಿಯಾಗಿ ಬೇಡಿಕೊಂಡರು ಬಿಡಲಿಲ್ಲ. ನನ್ನ ಕಾಲರ್‌ನಲ್ಲಿ ಹಿಡಿದು ಎತ್ತಿ ಜೀಪಿನ ಒಳಗೆ ಹಾಕಿದರು. ಬಳಿಕ ಠಾಣೆಗೆ ಕರೆದುಕೊಂಡು ಹೋಗುವ ದಾರಿಯುದ್ದಕ್ಕೂ ಹೊಡೆದುಕೊಂಡೇ ಹೋದರು. ಠಾಣೆಯ ಒಳಗೆ ಹಾಕಿದರು. ಬಳಿಕ ಸಾಹುಕಾರು ಬಂದು ನನ್ನನ್ನು ಬಿಡಿಸಿಕೊಂಡು ಹೋದರು. ಇಂತಹವರ ಕಾಟದಿಂದ ನಮ್ಮಂತವರು ದುಡಿಯಲು ಬಹಳ ಕಷ್ಟ ಇದೆ ಎಂದು ಅವರು ಕಣ್ಣೀರು ಹಾಕಿದರು.

ಇದೇ ವಿಚಾರವಾಗಿ ಆಸ್ಪತ್ರೆ ಮುಂದೆ ಜಮಾಯಿಸಿದ ಲಾರಿ ಹಾಗೂ ಟೆಂಪೋ ಮಾಲಕ ಹಾಗೂ ಚಾಲಕ ಸಂಘದ ಪದಾಧಿಕಾರಿಗಳು, ದೌರ್ಜನ್ಯ ಎಸಗಿದ ಎಸ್ಸೈ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News