ಕೋವಿಡ್ ಲಸಿಕೆ ನಂತರದ ಪರಿಣಾಮಗಳು ಮತ್ತು ಸಾವಿನ ಕುರಿತು ಅಂಕಿ ಅಂಶಗಳು

Update: 2021-04-10 17:35 GMT

ಹೊಸದಿಲ್ಲಿ,ಎ.10: ದೇಶದಲ್ಲಿ ಮಾ.29ಕ್ಕೆ ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡ ಬಳಿಕ ಸುಮಾರು 180 ಜನರು ಮೃತಪಟ್ಟಿದ್ದಾರೆ ಎಂದು ಲಸಿಕೆ ನೀಡಿಕೆ ನಂತರದ ವ್ಯತಿರಿಕ್ತ ಪರಿಣಾಮಗಳ (ಎಇಎಫ್‌ಐ) ಕುರಿತ ಸಮಿತಿಗೆ ಸಲ್ಲಿಕೆಯಾಗಿರುವ ವರದಿಗಳು ತೋರಿಸಿವೆ. ನಿರ್ದಿಷ್ಟ ರೋಗದ ವಿರುದ್ಧ ಲಸಿಕೆ ನೀಡಿದ ಬಳಿಕ ಜನರಲ್ಲಿ ಸಂಭವಿಸಬಹುದಾದ ಯಾವುದೇ ಅಸ್ವಸ್ಥತೆಗಳನ್ನು ಎಇಎಫ್‌ಐ ಎಂದು ಪ್ರಸ್ತಾಪಿಸಲಾಗುತ್ತದೆ ಮತ್ತು ಈ ಅಸ್ವಸ್ಥತೆಗಳಿಗೆ ಯಾವಾಗಲೂ ಲಸಿಕೆಯೇ ಕಾರಣವಾಗಬೇಕೆಂದಿಲ್ಲ. ದೇಶದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಎಇಎಫ್‌ಐ ಸಮಿತಿಗಳು ಅಸ್ತಿತ್ವದಲ್ಲಿವೆ.

ಈ ವರ್ಷದ ಜ.16ರಿಂದ 95.43 ಮಿಲಿಯನ್ ಡೋಸ್‌ಗಳಷ್ಟು ಕೋವಿಡ್-19 ಲಸಿಕೆಯನ್ನು ನೀಡಲಾಗಿದ್ದು, ಸುಮಾರು 11.27 ಮಿ.ಜನರು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ.

ಎ.9ಕ್ಕೆ ಇದ್ದಂತೆ ಅಪ್‌ಡೇಟ್ ಮಾಡಲಾದ ಎಇಎಫ್‌ಐಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ,ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್‌ನ ಡೋಸ್ ಪಡೆದ ಬಳಿಕ 20,000ಕ್ಕೂ ಅಧಿಕ ಜನರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ ಎಂದು ಎಇಎಫ್‌ಐಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು. ಈ ಪೈಕಿ ಸುಮಾರು ಶೇ.97ರಷ್ಟು ಜನರಲ್ಲಿ ಸೌಮ್ಯ ಅಥವಾ ಮಧ್ಯಮ ಸ್ವರೂಪದ ಎಇಎಫ್‌ಐಗಳು ಕಾಣಿಸಿಕೊಂಡಿದ್ದು,ಇವುಗಳಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಗಂಭೀರ ಮತ್ತು ತೀವ್ರ ಸ್ವರೂಪದ ಪರಿಣಾಮಗಳಿವೆಯಾದರೂ ಸರಕಾರವು ಸುಮಾರು ಒಂದು ತಿಂಗಳಿನಿಂದ ಅವುಗಳ ಬಗ್ಗೆ ತಾಜಾ ಮಾಹಿತಿಗಳನ್ನು ಒದಗಿಸಿಲ್ಲ.

  ರಾಷ್ಟ್ರೀಯ ಎಇಎಫ್‌ಐ ಸಮಿತಿಗೆ ಸಲ್ಲಿಕೆಯಾಗಿರುವ ವರದಿಯು ಈ ವಿಷಯದ ಮೇಲೆ ಕೊಂಚ ಬೆಳಕನ್ನು ಬೀರಿದೆ. ಮಾ.31ಕ್ಕೆ ಇದ್ದಂತೆ 180 ಸಾವುಗಳು ಸೇರಿದಂತೆ ಗಂಭೀರ ಪರಿಣಾಮದ 617 ಪ್ರಕರಣಗಳು ವರದಿಯಾಗಿದ್ದವು. ಎಇಎಫ್‌ಐಗಳಿದ್ದ ಸುಮಾರು 305 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಈ ಪೈಕಿ ಸುಮಾರು 276 ಜನರು ಲಸಿಕೆ ತೆಗೆದುಕೊಂಡ ಬಳಿಕ ಮೂರು ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಲಸಿಕೆ ತೆಗೆದುಕೊಂಡ ಬಳಿಕ ಮೂರು ದಿನಗಳಲ್ಲಿ 124 ಸಾವುಗಳು ಸಂಭವಿಸಿದ್ದು,ನಂತರ ಸಾವಿನ ಪ್ರಮಾಣ ಕ್ರಮೇಣ ಇಳಿಮುಖಗೊಂಡಿದೆ.

ಲಸಿಕೆಗಳು ಈ ವ್ಯತಿರಿಕ್ತ ಪರಿಣಾಮಗಳು ಮತ್ತು ಸಾವುಗಳನ್ನು ಉಂಟು ಮಾಡುತ್ತವೆ ಎನ್ನುವುದು ಅಗತ್ಯವೇನಲ್ಲ. ಕೆಲವು ಔಷಧಿಗಳು ಮತ್ತು ಲಸಿಕೆಗಳು ಕೆಲವು ಜನರಿಗೆ ಅಥವಾ ಸಾರ್ವತ್ರಿಕವಾಗಿ ಅಸುರಕ್ಷಿತ ಎನ್ನುವುದು ವಿಶ್ವಾದ್ಯಂತ ಎಇಎಫ್‌ಐ ಸಮೀಕ್ಷೆಗಳು ಮತ್ತು ತನಿಖೆಗಳಲ್ಲಿ ಕಂಡು ಬಂದಿದೆಯಾದರೂ ಭಾರತದಲ್ಲಿ ಮತ್ತು ವಿಶ್ವಾದ್ಯಂತ ಬಳಕೆಯಾಗುತ್ತಿರುವ ಕೋವಿಡ್-19 ಲಸಿಕೆಗಳು ಈವರೆಗೆ ಅಸುರಕ್ಷಿತ ಎಂದು ಕಂಡುಬಂದಿಲ್ಲ ಎಂದಿವೆ ವರದಿಗಳು.

 ಸದ್ಯದ ಮಟ್ಟಿಗೆ ಸರಕಾರವು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಈ ಎರಡೂ ಲಸಿಕೆಗಳು ಸುರಕ್ಷಿತವಾಗಿದ್ದು,ಆದ್ಯತೆಯ ಗುಂಪುಗಳಿಗೆ ಸೇರಿದವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಹೇಳುತ್ತಿದೆ.

ಸಾವುಗಳು ಸೇರಿದಂತೆ ಎಲ್ಲ ಗಂಭೀರ ವ್ಯತಿರಿಕ್ತ ಪರಿಣಾಮಗಳು ಲಸಿಕೆಯೊಂದಿಗೆ ಗುರುತಿಸಿಕೊಂಡಿವೆಯೇ ಎನ್ನ್ನುವುದನ್ನು ತಿಳಿದುಕೊಳ್ಳಲು ರಾಷ್ಟ್ರೀಯ ಎಇಎಫ್‌ಐ ಸಮಿತಿಯು ಅವುಗಳ ಪುನರ್‌ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News