ಶಾಲಾ ಮಕ್ಕಳಿಗೆ ಸಿಎಎ, ಎನ್‌ಆರ್‌ಸಿ ಕುರಿತು ಪಾಠ ಮಾಡಿದವರ ವಿರುದ್ಧ ದೇಶದ್ರೋಹ ಪ್ರಕರಣ

Update: 2021-04-10 18:11 GMT

ಪಾಟ್ನಾ, ಎ.10: ಬಿಹಾರದ ದಾನಪುರದಲ್ಲಿರುವ ಸನಿವಾಸ ಶಾಲೆ(ರೆಸಿಡೆನ್ಶಿಯಲ್ ಸ್ಕೂಲ್)ನ ಮಕ್ಕಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ಕುರಿತು ಪಾಠ ಮಾಡಿದ 2 ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.

 ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕುರಿತು ಮಕ್ಕಳಿಗೆ ಪ್ರಚೋದನಕಾರಿ ಮತ್ತು ರಾಷ್ಟ್ರವಿರೋಧಿ ಪಾಠ ಮಾಡಿರುವ ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್) ಮಾಡಿದ ಶಿಫಾರಸಿನಂತೆ ಪಾಟ್ನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವಯಂಸೇವಾ ಸಂಸ್ಥೆಗಳ ಕೋರಿಕೆಯಂತೆ ಫೆಬ್ರವರಿ 15 ಮತ್ತು 25ರಂದು ದಾನಾಪುರ ಸನಿವಾಸ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ 6ರಿಂದ 18 ವರ್ಷ ಪ್ರಾಯದ ಸುಮಾರು 60 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಇತ್ತೀಚೆಗೆ ಶಾಲೆಯ ಪರಿವೀಕ್ಷಣೆಗೆ ಎನ್‌ಸಿಪಿಸಿಆರ್ ಅಧಿಕಾರಿಗಳು ಬಂದಿದ್ದಾಗ ವಿದ್ಯಾರ್ಥಿನಿಯರ ಹೋಂವರ್ಕ್ ಪುಸ್ತಕ ಪರಿಶೀಲಿಸಿದ್ದಾರೆ. ಒಬ್ಬಳು ವಿದ್ಯಾರ್ಥಿನಿ ‘ನಾನು ಎನ್‌ಆರ್‌ಸಿಯನ್ನು ವಿರೋಧಿಸುತ್ತೇನೆ. ನನಗೆ ಮನೆಯಿಲ್ಲ ಎಂದಾದರೆ ಗುರುತುಪತ್ರ ಎಲ್ಲಿಂದ ತರಲಿ ’ ಎಂದು ಬರೆದಿದ್ದಳು. ಈ ಹಿನ್ನೆಲೆಯಲ್ಲಿ ವಿವರವಾಗಿ ಪರಿಶೀಲಿಸಿದಾಗ , 2019ರ ಡಿಸೆಂಬರ್ 26ರಂದು ವಿದ್ಯಾರ್ಥಿಗಳಿಗೆ ನಡೆಸಿದ್ದ ಪಾಠದಲ್ಲಿ ‘ ಇದು(ಎನ್‌ಆರ್‌ಸಿ/ಸಿಎಎ) ಬಹುತೇಕ ಕೊಳೆಗೇರಿಯಲ್ಲಿ ವಾಸಿಸುವವರ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯ್ದೆಗೆ ಅನುಮೋದನೆ ದೊರೆತರೆ, ನಾವೆಲ್ಲಾ ಇದನ್ನು ವಿರೋಧಿಸಬೇಕು’ ಎಂದು ಉಲ್ಲೇಖಿಸಲಾಗಿದೆ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನುಂಗೊ ಪಾಟ್ನಾ ಪೊಲೀಸರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

   ಶಾಲೆಯ ಪರಿವೀಕ್ಷಣೆ ಸಂದರ್ಭ ಪರಿಶೀಲಿಸಿದ ಕಾಗದ ಪತ್ರ ಮತ್ತು ವಿದ್ಯಾರ್ಥಿಗಳ ಹೋಂವರ್ಕ್ ಪಠ್ಯವನ್ನು ಗಮನಿಸಿ ‘ಈ ರೀತಿಯ ಪಾಠಗಳು ಮಕ್ಕಳನ್ನು ದೇಶದ ಕಾನೂನಿನ ವಿರುದ್ಧ ಎತ್ತಿಕಟ್ಟಬಹುದು ’ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News