ಭಿಕ್ಷಾಟನೆ ಅಪರಾಧೀಕರಿಸಿದ ನಿಯಮ ರದ್ದತಿಗೆ ಅರ್ಜಿ: ಕೇಂದ್ರ, 4 ರಾಜ್ಯಗಳಿಗೆ ಸುಪ್ರೀಂ ನೋಟಿಸ್

Update: 2021-04-10 18:21 GMT

  ಹೊಸದಿಲ್ಲಿ, ಎ.10: ಭಿಕ್ಷಾಟನೆ ನಡೆಸುವುದನ್ನು ಅಪರಾಧ ಎಂದು ಪರಿಗಣಿಸುವ ನಿಯಮದ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಗೆ 3 ವಾರದೊಳಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಶನಿವಾರ ಕೇಂದ್ರ ಮತ್ತು 4 ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಭಿಕ್ಷಾಟನೆ ಅಪರಾಧ ಎಂದು ವಿಶ್ಲೇಷಿಸಿರುವ ಬಾಂಬೆ ಪ್ರಿವೆನ್ಷನ್ ಆಫ್ ಬೆಗ್ಗಿಂಗ್ ಆ್ಯಕ್ಟ್ 1959ರ ಉಪಬಂಧಕ್ಕೆ ಸಾಂವಿಧಾನಿಕ ಮಾನ್ಯತೆಯಿಲ್ಲ ಎಂದು 2018ರ ಆಗಸ್ಟ್‌ನಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪು ನೀಡಿ ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಭಿಕ್ಷಾಟನೆ ನಡೆಸುವುದು ಅಪರಾಧದ ಕೃತ್ಯವಲ್ಲ ಎಂದು ಆದೇಶಿಸಿತ್ತು.

  ಈ ಆದೇಶವನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದ ಮೀರತ್ ನಿವಾಸಿ ವಿಶಾಲ್ ಪಾಠಕ್ ಎಂಬವರು, ಭಿಕ್ಷಾಟನೆ ಅಪರಾಧ ಎಂಬ ಆದೇಶವು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ . 2011ರ ಗಣತಿ ಪ್ರಕಾರ ದೇಶದಲ್ಲಿ 4,13,670 ಭಿಕ್ಷುಕರಿದ್ದಾರೆ. ಕೆಲವು ಕಾರಣಗಳಿಂದ ಭಿಕ್ಷಾಟನೆ ನಡೆಸುವ ಅನಿವಾರ್ಯತೆಗೆ ಸಿಲುಕುವ ವ್ಯಕ್ತಿಗಳನ್ನು ಅವರ ಕೃತ್ಯಗಳಿಗಾಗಿ ದೋಷಿ ಎಂದು ಪರಿಗಣಿಸುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

  ಅರ್ಜಿಗೆ ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರ್ಯಾಣ ಮತ್ತು ಬಿಹಾರ ಸರಕಾರಗಳಿಗೆ ಕಳೆದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಬಿಹಾರ ಸರಕಾರ ಮಾತ್ರ ಉತ್ತರಿಸಿತ್ತು. ಉಳಿದ 4 ರಾಜ್ಯಗಳು ಹಾಗೂ ಕೇಂದ್ರ ಸರಕಾರ 3 ವಾರದೊಳಗೆ ಉತ್ತರಿಸಬೇಕು ಎಂದು ಸೂಚಿಸಿದ ಸುಪ್ರೀಂಕೋರ್ಟ್, ವಿಚಾರಣೆಯನ್ನು 3 ವಾರದ ಬಳಿಕ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News