ಕೋವಿಡ್19 ಔಷಧಿಯ ಅಭಾವವುಂಟಾಗದಂತೆ ರಾಜ್ಯ,ಕೇಂದ್ರಾಡಳಿತಗಳಿಗೆ ಮೋದಿ ಸರಕಾರ ಸೂಚನೆ

Update: 2021-04-10 18:26 GMT

 ಹೊಸದಿಲ್ಲಿ, ಎ. 10: ದೇಶಾದ್ಯಂತ ಕೋವಿಡ್-19ನ ಎರಡನೇ ಅಲೆ ತಾಂಡವವಾಡುತ್ತಿರುವ ನಡುವೆ, ಕೊರೋನ ಸೋಂಕಿನ ಚಿಕಿತ್ಸೆಗಾಗಿ ರೆಮ್ ಡೆಸಿವಿರ್ ಔಷಧಿಯ ಲಭ್ಯತೆಯನ್ನು ಖಾತರಿಪಡಿಸುವಂತೆ ಹಾಗೂ ಅದರ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಮಾರಾಟವನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನರೇಂದ್ರ ಮೋದಿ ಸರಕಾರವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

 ರೆಮ್ ಡೆಸಿವಿರ್, ಕೋವಿಡ್-19 ರೋಗಿಳ ಚಿಕಿತ್ಸೆಗೆ ಅತ್ಯಂತ ಬೇಡಿಕೆಯಿರುವ ಔಷಧಿಯಾಗಿದೆ.

 ಭಾರತೀಯ ಔಷಧಿ ಮಹಾ ನಿಯಂತ್ರಕ (ಡಿಸಿಜಿಐ)ರಾದ ವಿ.ಜಿ.ಸೋಮಾನಿ ಎಪ್ರಿಲ್ 7ರಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ ಪತ್ರ ಬರೆದು ರೆಮ್ ಡೆಸಿವಿರ್ ಔಷಧಿಯ ಕೊರತೆ ಹಾಗೂ ಅದರ ಮಾರಾಟದಲ್ಲಿ ಅವ್ಯವಹಾರಗಳು ನಡೆಯದಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

 ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ರೆಮ್ ಡೆಸಿವಿರ್ ಔಷಧಿಯ ಅಭಾವ ತಲೆದೋರಿರುವುದರಿಂದ ಅದರ, ಕಾಳಸಂತೆ ಮಾರಾಟ ಹಾಗೂ ಅಕ್ರಮ ದಾಸ್ತಾನು ವ್ಯಾಪಕವಾಗಿ ನಡೆಯುವ ಸಾಧ್ಯತೆಯಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ.

ಮಧ್ಯಪ್ರದೇಶ (ಭೋಪಾಲ್, ಇಂದೋರ್, ಗ್ವಾಲಿಯರ್), ಗುಜರಾತ್ (ಅಹ್ಮದಾಬಾದ್, ಸೂರತ್,ರಾಜಕೋಟ್) ಹಾಗೂ ಮಹಾರಾಷ್ಟ್ರ (ಮುಂಬೈ, ಥಾಣೆ, ಅಮರಾವತಿ)ಗಳಲ್ಲಿ ರೆಮ್ ಡೆಸಿವಿರ್ ಚುಚ್ಚು ಮದ್ದಿನ ಕೊರತೆಯುಂಟಾಗಿರುವುದು ವರದಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಔಷಧಿಯ ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮಾರಾಟ ನಡೆಯುವುದಕ್ಕೆ ಕಾರಣವಾಗಬಹುದಾಗಿದೆ ಎಂದವರು ಹೇಳಿದರು.

  ಸಾರ್ವಜನಿಕರು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಮಿಡಿಸೆವಿರ್ ಇಂಜೆಕ್ಷನ್‌ನ ಪೂರೈಕೆಗೆ ತಕ್ಷಣವೇ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಕೋರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ರೆಮ್ ಡೆಸಿವಿರ್ ಔಷಧಿಯ ಅಕ್ರಮ ದಾಸ್ತಾನು ಹಾಗೂ ದುಬಾರಿ ದರದಲ್ಲಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ನಿಗಾವಹಿಸುವಂತೆಯೂ ಸೋಮಾನಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ ಸೂಚಿಸಿದ್ದಾರೆ.

 ಡಿಜಿಸಿಐ ಅವರ ಪತ್ರದ ಬೆನ್ನಲ್ಲೇ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ (ಎಐಓಸಿಡಿ)ಯು ರೆಮ್ ಡೆಸಿವಿರ್ ಔಷಧಿಯ ಕಾಳದಾಸ್ತಾನು ಮಾಡದಂತೆ ತನ್ನ 9.40 ಸದಸ್ಯರಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News