×
Ad

ಕೊರತೆ ಅಪಸ್ವರದ ನಡುವೆ ಇಂದಿನಿಂದ 'ಲಸಿಕಾ ಉತ್ಸವ'

Update: 2021-04-11 09:35 IST

ಹೊಸದಿಲ್ಲಿ, ಎ.11: ವಿಶ್ವದಲ್ಲೇ ಅತಿವೇಗವಾಗಿ 10 ಕೋಟಿ ಮಂದಿಗೆ ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆ ಹಾಗೂ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಬಗ್ಗೆ ಕೂಗು ಎದ್ದಿರುವ ನಡುವೆಯೇ ಗರಿಷ್ಠ ಸಂಖ್ಯೆಯ ಅರ್ಹ ನಾಗರಿಕರನ್ನು ತಲುಪುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಇಂದಿನಿಂದ ನಾಲ್ಕು ದಿನಗಳ ಕಾಲ ದೇಶಾದ್ಯಂತ ಲಸಿಕಾ ಉತ್ಸವ ಹಮ್ಮಿಕೊಳ್ಳಲು ಸಲಹೆ ಮಾಡಿದೆ.
ಈ ಉತ್ಸವದ ಅಂಗವಾಗಿ ಎಪ್ರಿಲ್ 11ರಿಂದ 14ರ ವರೆಗೆ ದೇಶಾದ್ಯಂತ ಅರ್ಹ ವಯೋಮಾನದವರು ಸಾಮೂಹಿಕ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. "ಎಪ್ರಿಲ್ 11ರಿಂದ 14ರವರೆಗೆ ನಾವು ಲಸಿಕೆ ಉತ್ಸವ ಆಚರಿಸಬಹುದೇ? ಈ ಅವಧಿಯಲ್ಲಿ ಸಾಧ್ಯವಾಷ್ಟೂ ಅರ್ಹ ಜನತೆಗೆ ಲಸಿಕೆ ಹಾಕಿಸಬೇಕು ಹಾಗೂ ಲಸಿಕೆ ವ್ಯರ್ಥವಾಗುವುದನ್ನು ಶೂನ್ಯವಾಗಿಸಬೇಕು" ಎಂದು ಮೋದಿ ಮುಖ್ಯಮಂತ್ರಿಗಳ ಜತೆಗಿನ ಸಭೆಯಲ್ಲಿ ಕರೆ ನೀಡಿದ್ದರು.

ಹಲವು ರಾಜ್ಯಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಲಸಿಕೆ ನೀಡಿಕೆ ಪ್ರಮಾಣವನ್ನು ದ್ವಿಗುಣಗೊಳಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಉತ್ತರ ಪ್ರದೇಶದಲ್ಲಿ 6,000 ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಲಸಿಕೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ವೆಬಿನಾರ್‌ನಲ್ಲಿ ಸಿಎಂ ಆದಿತ್ಯನಾಥ್ ಹಾಗೂ ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ. ಈ ಉತ್ಸವದ ಅವಧಿಯಲ್ಲಿ ಬಿಹಾರದಲ್ಲಿ ನಾಲ್ಕು ಲಕ್ಷ ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಮಧ್ಯೆ ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಮಹಾರಾಷ್ಟ್ರ, ದಿಲ್ಲಿ ಮತ್ತಿತರ ರಾಜ್ಯಗಳು ಕೋವಿಡ್-19 ಲಸಿಕೆ ಕೊರತೆ ಬಗ್ಗೆ ದನಿಯೆತ್ತಿವೆ. ದೇಶದಲ್ಲಿ ಶನಿವಾರ 1,45,384 ಹೊಸ ಕೋವಿಡ್-19 ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,32,05,926ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News