ಕೋವಿಡ್ ಕಾರಣಕ್ಕೆ ಪ್ರತಿಭಟನೆ ನಿಲ್ಲಿಸಿ ಎಂದು ರೈತರಿಗೆ ಮನವಿ ಮಾಡಿದ ಕೇಂದ್ರ ಸಚಿವ
ಹೊಸದಿಲ್ಲಿ, ಎ.11: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿರುವುದರಿಂದ ಸೃಷ್ಟಿಯಾಗಿರುವ ಅನಿಶ್ಚಿತತೆಯ ನಡುವೆಯೇ, ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಿಲ್ಲಿಸಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಮನವಿ ಮಾಡಿದ್ದಾರೆ.
ವಿವಾದಾತ್ಮಕ ಅಂಶಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮಾತುಕತೆಗೆ ಸರ್ಕಾರ ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರೈತರು ಪ್ರತಿಭಟನೆ ಬಿಟ್ಟು ಮಾತುಕತೆಗೆ ಬರುವಂತೆ ಅವರು ಆಹ್ವಾನ ನೀಡಿದ್ದಾರೆ.
ರೈತರ ಹೇಳಿಕೆಗಳಲ್ಲಿ ನಿರಂತರತೆ ಇಲ್ಲ; ಪ್ರತಿಭಟನಾಕಾರರು ಬೆಳಗ್ಗೆ ಒಂದು ಹೇಳುತ್ತಿದ್ದಾರೆ; ಸಂಜೆ ಮತ್ತೊಂದು ಹೇಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರೈತರ ಜೀವಗಳು ದೇಶಕ್ಕೆ ಮುಖ್ಯ; ಆದ ಕಾರಣ ಸುರಕ್ಷಾ ಶಿಷ್ಟಾಚಾರಗಳನ್ನು ಪಾಲಿಸಿ; ಪ್ರತಿಭಟನೆ ಕೈಬಿಡಿ ಎಂದು ಅವರು ಕೋರಿದರು.
ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆ ವ್ಯಾಪಕವಾಗಿದ್ದರೂ, ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಚಿವರು ಮತ್ತೆ ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಪ್ರತಿಭಟನೆಯ 150ನೇ ದಿನದ ಅಂಗವಾಗಿ ಈ ತಿಂಗಳ 24ರಂದು ದಿಲ್ಲಿ ಗಡಿಯಲ್ಲಿ ಒಂದು ವಾರದ ಬೃಹತ್ ಕಾರ್ಯಕ್ರಮ ಆಯೋಜಿಸಲು ಪ್ರತಿಭಟನಾಕಾರರು ಈಗಾಗಲೇ ನಿರ್ಧರಿಸಿದ್ದಾರೆ.