ಕಾಂಗ್ರೆಸ್‌ ಮುಖಂಡರಿಂದ ಆಸ್ಪತ್ರೆಯಲ್ಲಿ ಅನುಚಿತ ವರ್ತನೆ: ರಾಜೀನಾಮೆ ನೀಡಿದ ವೈದ್ಯ

Update: 2021-04-11 09:52 GMT

ಭೋಪಾಲ್: ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಾವಿನ ನಂತರ ಮಾಜಿ ಸಚಿವ ಪಿಸಿ ಶರ್ಮಾ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಶನಿವಾರ ರಾಜೀನಾಮೆ ನೀಡಿದ ಘಟನೆ ನಡೆದಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, "ವೈದ್ಯರನ್ನು ನಾಶಗೊಳಿಸುವುದಕ್ಕಿಂತ ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿ" ಎಂದು ಮನವಿ ಮಾಡಿದರೆ, ಪಿಸಿ ಶರ್ಮಾ "ವೈದ್ಯರೊಂದಿಗೆ ಅಸಭ್ಯವಾಗಿ ಮಾತನಾಡಲಿಲ್ಲ ಮತ್ತು ರೋಗಿಯು ತಮ್ಮ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿದ್ದರಿಂದ ಮಾತ್ರ ತಾನು ಇದರಲ್ಲಿ ಭಾಗಿಯಾಗಿದ್ದೆ" ಎಂದು ಹೇಳಿದ್ದಾರೆ.

"ನಮ್ಮ ಹಿರಿಯ ವೈದ್ಯ ಯೋಗೇಂದ್ರ ಶ್ರೀವಾಸ್ತವ ಅವರೊಂದಿಗೆ ಕೆಲವು ರಾಜಕಾರಣಿಗಳು ಕೆಟ್ಟದಾಗಿ ವರ್ತಿಸಿದ ನಂತರ ಅವರು ರಾಜೀನಾಮೆ ನೀಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಯೋಗೇಂದ್ರ ರೋಗಿಯ ಕುಟುಂಬಕ್ಕೆ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದರು. ಚಿಕಿತ್ಸೆಯ ಸಮಯದಲ್ಲಿ ಅವರು ನಿಧನರಾದರು. ನಂತರ ಕೆಲವು ರಾಜಕಾರಣಿಗಳು ವೈದ್ಯರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಸರ್ಕಾರಿ ಜೆಪಿ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ರಾಕೇಶ್ ಶ್ರೀವಾಸ್ತವ ಪಿಟಿಐಗೆ ತಿಳಿಸಿದ್ದಾರೆ.

ಈ ಘಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶರ್ಮಾ ಮತ್ತು ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಯೋಗೇಂದ್ರ ಚೌಹಾಣ್ ಅವರು ಡಾ.ಯೋಗೇಂದ್ರ ಶ್ರೀವಾಸ್ತವ ವಿರುದ್ಧ ಹರಿಹಾಯುವ ದೃಶ್ಯಾವಳಿಗಳು ಕಂಡು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News