×
Ad

ಈ ವರ್ಷದ ಸಿಬಿಎಸ್ ಇ ಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸಿ: ಕೇಂದ್ರಕ್ಕೆ ಪ್ರಿಯಾಂಕಾ ಗಾಂಧಿ ಪತ್ರ

Update: 2021-04-11 17:43 IST

ಹೊಸದಿಲ್ಲಿ: ಕಿಕ್ಕಿರಿದ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೋವಿಡ್ -19 ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಈ ವರ್ಷದ ಸಿಬಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರವಿವಾರ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರಿಗೆ ಪತ್ರ ಬರೆದಿದ್ದಾರೆ.

ಭಾರತದಲ್ಲಿ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಹೊಸ ಕೊರೋನವೈರಸ್ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಸಮಯದಲ್ಲಿ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ಕಿಕ್ಕಿರಿದ ಪರೀಕ್ಷಾ ಹಾಲ್‌ಗಳಲ್ಲಿ ಕುಳಿತುಕೊಳ್ಳುವಂತೆ ಮಾಡಿದರೆ ಪರೀಕ್ಷಾ ಕೇಂದ್ರಗಳು ಕೋವಿಡ್ -19 ಹಾಟ್‌ಸ್ಪಾಟ್‌ಗಳಾಗಿ ಮಾರ್ಪಟ್ಟರೆ ಸರಕಾರ ಹಾಗೂ ಸಿಬಿಎಸ್‌ಇ ಜವಾಬ್ದಾರರಾಗುತ್ತವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ರಾಹುಲ್ ಗಾಂಧಿ ಕೂಡ ಸಹೋದರಿಯ ಟ್ವೀಟ್ ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸಿಬಿಎಸ್ಇ ಬೋರ್ಡ್ ಪರೀಕ್ಷೆ-2021 ಅನ್ನು ಮರುಪರಿಶೀಲಿಸುವಂತೆ ಕೇಳಿಕೊಂಡರು.

"ವಿನಾಶಕಾರಿ ಕೊರೋನ ಎರಡನೇ ಅಲೆಯ ಕಾರಣಕ್ಕೆ ಸಿಬಿಎಸ್ಇ ಪರೀಕ್ಷೆಗಳನ್ನು ನಡೆಸುವುದನ್ನು ಮರುಪರಿಶೀಲಿಸಬೇಕು. ವ್ಯಾಪಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟ ಎಲ್ಲರನ್ನು ಸಂಪರ್ಕಿಸಬೇಕು. ಭಾರತದ ಯುವಕರ ಭವಿಷ್ಯದೊಂದಿಗೆ ಕೇಂದ್ರ ಸರಕಾರ ಎಷ್ಟು ಬಾರಿ ಆಡಲು ಉದ್ದೇಶಿಸಿದೆ?" ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಿಬಿಎಸ್‌ಇ ಬೋರ್ಡ್ ಪರೀಕ್ಷೆ-2021  ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ 10 ನೇ ತರಗತಿ ಪರೀಕ್ಷೆಗಳು ಮೇ 4 ರಿಂದ ಜೂನ್ 7 ರವರೆಗೆ ಹಾಗೂ 12 ನೇ ತರಗತಿಯ ಪರೀಕ್ಷೆಗಳು ಮೇ 4 ಮತ್ತು ಜೂನ್ 15 ರ ನಡುವೆ ನಡೆಯಲಿದೆ.

ಕೋವಿಡ್ -19 ಸುರಕ್ಷತೆಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು  ಖಚಿತಪಡಿಸಿಕೊಳ್ಳಲು ದೇಶದಲ್ಲಿ ಪರೀಕ್ಷಾ ಕೇಂದ್ರಗಳನ್ನು 40-50 ಶೇ.ದಷ್ಟು ಹೆಚ್ಚಿಸಲಾಗಿದೆ ಎಂದು ಸಿಬಿಎಸ್‌ಇ ಈ ಹಿಂದೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News