×
Ad

ಪತ್ರಿಕೆಯ ಮುಖಪುಟದಲ್ಲಿ ಗುಜರಾತ್‌ ಬಿಜೆಪಿ ಅಧ್ಯಕ್ಷರ ಫೋನ್‌ ನಂಬರ್‌ ಪ್ರಕಟಿಸಿದ ʼದಿವ್ಯ ಭಾಸ್ಕರ್‌ʼ

Update: 2021-04-11 20:15 IST

ಅಹ್ಮದಾಬಾದ್:‌ ಗುಜರಾತ್‌ ನಲ್ಲಿ ಈಗಾಗಲೇ ಕೋವಿಡ್‌ ಪರಿಸ್ಥಿತಿಯು ತಾರಕಕ್ಕೇರಿದೆ. ಗುಜರಾತ್‌ ನಲ್ಲಿ ಪ್ರತೀ ಎರಡು ಮನೆಗಳಿಗೊಬ್ಬರಂತೆ ಕೋವಿಡ್‌ ಬಾಧಿತರಿದ್ದಾರೆ ಎಂದು ಶಾಸಕ ಜಿಗ್ನೇಶ್‌ ಮೆವಾನಿ ಟ್ವೀಟ್‌ ಮಾಡಿದ್ದರು. ಈ ನಡುವೆ ಗುಜರಾತ್‌ ನ ಬಿಜೆಪಿ ರಾಜ್ಯಾಧ್ಯಕ್ಷರು ಸೂರತ್‌ ನಗರಕ್ಕೆಂದು 5000 ರೆಮಿಡೆಸಿವಿರ್‌ ಚುಚ್ಚುಮದ್ದುಗಳನ್ನು ತರಿಸಿದ್ದು, ಬಿಜೆಪಿಯ ಕಚೇರಿಯಲ್ಲಿ ಅಗತ್ಯವಿರುವವರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ಅಧ್ಯಕ್ಷರ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ಕಚೇರಿಯ ಮುಂದೆ ಈ ಚುಚ್ಚುಮದ್ದಿಗಾಗಿ ಜನರು ಕ್ಯೂ ನಿಲ್ಲಲು ಪ್ರಾರಂಭಿಸಿದ್ದರು. ವಿತರಣೆಯನ್ನೂ ಪ್ರಾರಂಭಿಸಲಾಗಿತ್ತು. ಬಳಿಕ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ "ಸೂರತ್‌ ನಗರಕ್ಕೆಂದು 10,000 ರೆಮೆಡಿಸಿವಿರ್‌ ಚುಚ್ಚು ಮದ್ದುಗಳನ್ನು ವಿಶೇಷವಾಗಿ ತರಿಸಲಾಗಿದೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಈ ಕುರಿತಾದಂತೆ ಮಾಧ್ಯಮಗಳು ಶನಿವಾರದಂದು "ಚುಚ್ಚುಮದ್ದನ್ನು ರಾಜಕೀಯ ಪಕ್ಷದ ಅಧ್ಯಕ್ಷರ ಕಚೇರಿಯಲ್ಲಿ ಹೇಗೆ ವಿತರಿಸಲು ಸಾಧ್ಯ?" ಎಂದು ಪ್ರಶ್ನಿಸಿದಾಗ, ಮುಖ್ಯಮಂತ್ರಿಗಳು "ಅವರನ್ನೇ ಕೇಳಿ" ಎಂದು ಎಂದು ಹೇಳಿದ್ದರು. 

ಮುಖ್ಯಮಂತ್ರಿಗಳು ಸಮರ್ಪಕ ಉತ್ತರ ನೀಡದ್ದಕ್ಕೆ ಗುಜರಾತ್‌ ನ ಪ್ರಮುಖ ಪತ್ರಿಕೆ ʼದಿವ್ಯ ಭಾಸ್ಕರ್‌ʼ ತನ್ನ ಭಾನುವಾರದ ಪತ್ರಿಕೆಯಲ್ಲಿ ಗುಜರಾತ್‌ ಬಿಜೆಪಿ ಅಧ್ಯಕ್ಷರ ಫೋನ್‌ ನಂಬರ್‌ ಅನ್ನು ದಪ್ಪನೆಯ ಅಕ್ಷರದಲ್ಲಿ ಪ್ರಕಟಿಸಿಸದ್ದು, ಅವರನ್ನು ಕೇಳಿ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ. ದಿವ್ಯ ಭಾಸ್ಕರ್‌ ತನ್ನ ಅಹ್ಮದಾಬಾದ್‌, ಸೂರತ್‌, ವಡೋದರಾ, ರಾಜ್‌ ಕೋಟ್‌, ಭವ್ನಗರ್‌ ಮತ್ತು ಭುಜ್‌ ನ ಎಲ್ಲಾ ಆವೃತ್ತಿಯ ಮುಖಪುಟದಲ್ಲೂ ಫೋನ್‌ ನಂಬರ್‌ ಪ್ರಕಟಿಸಿದೆ.

"ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಒಂದು ಚುಚ್ಚುಮದ್ದನ್ನು ಸಹ ಪಡೆಯಲು ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವಾಗ ಬಿಜೆಪಿ ಅಧ್ಯಕ್ಷರು 5,000 ಚುಚ್ಚುಮದ್ದಿನ ದಾಸ್ತಾನು ಪಡೆಯಲು ಹೇಗೆ ಯಶಸ್ವಿಯಾದರು ಎಂಬ ಬಗ್ಗೆ ರಾಜ್ಯ ಏಜೆನ್ಸಿಗಳು ತನಿಖೆ ನಡೆಸಬೇಕು ”ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಅರ್ಜುನ್ ಮೋಧ್ವಾಡಿಯಾ ಹೇಳಿಕೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News