×
Ad

ಮ.ಪ್ರ.: 6 ವರ್ಷದ ಬಾಲಕಿಯ ಮೇಲೆ ತಾತ, ಇನ್ನೋರ್ವ ದುಷ್ಕರ್ಮಿಯಿಂದ ಅತ್ಯಾಚಾರ

Update: 2021-04-11 21:42 IST

ಭೋಪಾಲ್,ಎ.12: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಕೋಲಾರ್ ಪ್ರದೇಶದಲ್ಲಿ 6 ವರ್ಷದ ಬಾಲಕಿಯ ಮೇಲೆ ಆಕೆಯ ತಾತ ಹಾಗೂ ಇನ್ನೋರ್ವ ದುಷ್ಕರ್ಮಿ, ಆಕೆಯ ಕಿರಿಯ ಸಹೋದರನ ಮುಂದೆಯೇ ಅತ್ಯಾಚಾರ ಎಸಗಿದ ಬರ್ಬರ ಘಟನೆ ರವಿವಾರ ವರದಿಯಾಗಿದೆ.

 ಅತ್ಯಾಚಾರಕ್ಕೊಳಗಾಗಿದ್ದಳೆನ್ನಲಾದ ಬಾಲಕಿಗೆ ಕೇವಲ 6 ವರ್ಷ ವಯಸ್ಸಾಗಿದ್ದರೆ ಮತ್ತು ಆಕೆಯ ಸಹೋದರನ ವಯಸ್ಸು ಮೂರು ವರ್ಷವೆಂದು ಕೋಲಾರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಚಂದ್ರಕಾಂತ್ ಪಟೇಲ್ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದ್ದಾರೆ.

 ‘‘ ಸಂಜಯ್ ಎಂಬ ವ್ಯಕ್ತಿಯು, ಬಾಲಕ ಹಾಗೂ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ ಮತ್ತು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಕೆಲವು ಹೊತ್ತಿನ ಬಳಿಕ ಬಾಲಕಿಯ ತಾಯಿಯ ತಂದೆಯೂ (ತಾತ) ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಘಟನೆ ನಡೆದ ದಿನಾಂಕದ ಬಗ್ಗೆ ಇಬ್ಬರೂ ಅಪ್ರಾಪ್ತ ವಯಸ್ಕರಿಗೆ ಯಾವುದೇ ಸುಳಿವನ್ನು ನೀಡಲು ಸಾಧ್ಯವಾಗದ ಕಾರಣ ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಆರೋಪಿಗಳು ಬಾಲಕಿಗೆ 20 ರೂ. ನೀಡಿದ್ದು,ನಡೆದ ಘಟನೆಯನ್ನು ಬಹಿರಂಗಪಡಿಸದಂತೆ ಆಕೆಗೆ ಜೀವಬೆದರಿಕೆಯೊಡ್ಡಿದ್ದರು’’ ಎಂದು ಪಟೇಲ್ ಮಾಹಿತಿ ನೀಡಿದ್ದಾರೆ.

 ಗುರುವಾರದಂದು ಬಾಲಕಿಯ ತಾಯಿಗೆ ಮಗಳು ಯಾವುದೋ ಕಾರಣಕ್ಕಾಗಿ ಕೊರಗುತ್ತಿರುವುದನ್ನು ಗಮನಿಸಿದಳು ಮತ್ತು ನಡೆದ ಘಟನೆಯನ್ನು ಆಕೆಯಿಂದ ತಿಳಿದುಕೊಳ್ಳುವಲ್ಲಿ ಸಫಲಳಾದಳು. ಆ ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು ಸಂಜಯ್ ಹಾಗೂ ಸಂತ್ರಸ್ತ ಬಾಲಕಿಯ ತಾತನನ್ನು ಶುಕ್ರವಾರ ಬಂಧಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯಡಿ ಸಾಮೂಹಿಕ ಅತ್ಯಾಚಾರ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆಯ ನಿಯಮಗಳಡಿ ದೋಷಾರೋಪ ದಾಖಲಿಸಲಾಗಿದೆ ಎಂದು ಪಟೇಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News