ಬಿಹಾರ ಪೊಲೀಸ್ ಅಧಿಕಾರಿಯ ಥಳಿಸಿ ಹತ್ಯೆ ಪ್ರಕರಣ: 3 ಆರೋಪಿಗಳ ಬಂಧನ

Update: 2021-04-11 16:58 GMT

ಪಾಟ್ನ, ಎ.11: ಬೈಕ್ ಕಳವು ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಬಿಹಾರದ ಪೊಲೀಸ್ ಅಧಿಕಾರಿಯನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ 3 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಿಹಾರದ ಕಿಶನ್‌ಗಂಜ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣದ ಆರೋಪಿಗಳು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯಂತೆ ಬಿಹಾರದ ಪೊಲೀಸ್ ಅಧಿಕಾರಿ ಅಶ್ವಿನಿ ಕುಮಾರ್ ಉತ್ತರ ದಿನಾಜ್‌ಪುರಕ್ಕೆ ತೆರಳಿದ್ದರು. ಇಬ್ಬರು ಮಾಹಿತಿದಾರರು ಮತ್ತು 8 ಪೊಲೀಸ್ ಸಿಬಂದಿ ಇವರ ಜತೆಗಿದ್ದರು. ತನಿಖೆ ನಡೆಸಲು ಸ್ಥಳೀಯ ಪೊಲೀಸರ ಸಹಕಾರ ಕೋರಿದ್ದು ಅವರು ಸಹಕರಿಸುವ ಭರವಸೆ ನೀಡಿದ್ದರು ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.

ಉತ್ತರ ದಿನಾಜ್‌ಪುರದಲ್ಲಿ ಫಿರೋಝ್ ಆಲಂ ಎಂಬಾತನ ಮನೆಯೆದುರು ಕಳವಾದ ಬೈಕ್ ಪತ್ತೆಯಾಗಿದೆ. ಈ ಬಗ್ಗೆ ನೆರೆಹೊರೆಯವರಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಸ್ಥಳೀಯರ ಗುಂಪೊಂದು ದೊಣ್ಣೆ ಮತ್ತು ಕಲ್ಲಿನಿಂದ ದಾಳಿ ನಡೆಸಿದೆ. ಆಗ ಅಶ್ವಿನಿ ಕುಮಾರ್‌ರನ್ನು ಹೊರತುಪಡಿಸಿ ಉಳಿದವರು ಓಡಿಹೋಗಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದಾಗ, ಚುನಾವಣಾ ಕರ್ತವ್ಯದ ಹಿನ್ನೆಲೆಯಲ್ಲಿ ಸಹಕಾರ ನೀಡಲು ಸಾಧ್ಯವಾಗದು ಎಂದಿದ್ದಾರೆ. ಗುಂಪಿನ ಥಳಿತದಿಂದ ಕುಮಾರ್ ಮೃತಪಟ್ಟಿದ್ದಾರೆ ಎಂದು ಕಿಶನ್‌ಗಂಜ್ ಪೊಲೀಸ್ ಅಧೀಕ್ಷಕ ಕುಮಾರ್ ಆಶೀಶ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆಲಂ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News