ಜಮ್ಮು-ಕಾಶ್ಮೀರ: ಅಪ್ರಾಪ್ತ ವಯಸ್ಕನ ಸಹಿತ 5 ಶಂಕಿತ ಉಗ್ರರ ಹತ್ಯೆ

Update: 2021-04-11 18:15 GMT

ಶ್ರೀನಗರ, ಎ.11: ಜಮ್ಮು-ಕಾಶ್ಮೀರದ ಅನಂತನಾಗ್ ಮತ್ತು ಶೋಫಿಯಾನ್ ಜಿಲ್ಲೆಗಳಲ್ಲಿ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ 5 ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ರವಿವಾರ ಹೇಳಿದ್ದಾರೆ.

ಅನಂತನಾಗ್ ಜಿಲ್ಲೆಯ ಬಿಜ್‌ಬೆಹಾರ ನಗರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು, ಶೋಫಿಯಾನ್‌ನ ಹದಿಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಮೂವರು ಶಂಕಿತ ಉಗ್ರರು ಹತರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಶರಣಾಗಲು ಅವಕಾಶ ನೀಡಿದರೂ ಆತನ ಸಹವರ್ತಿಗಳು ಆತನನ್ನು ತಡೆದರು ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ಬಿಜ್‌ಬೆಹಾರ ನಗರದಲ್ಲಿ ಉಗ್ರರ ಚಲನವಲನದ ಬಗ್ಗೆ ದೊರೆತ ಮಾಹಿತಿಯಂತೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು ಇಲ್ಲಿ ಮೃತಪಟ್ಟ ಉಗ್ರರು ಶುಕ್ರವಾರ ಯೋಧನನ್ನು ಹತ್ಯೆಗೈದ ತಂಡದಲ್ಲಿದ್ದರು. ಶೋಫಿಯಾನ್‌ನಲ್ಲೂ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News