ಸುಪ್ರೀಂಕೋರ್ಟ್‍ನ ಶೇ.50ರಷ್ಟು ಸಿಬ್ಬಂದಿಗೆ ಕೊರೋನ ಪಾಸಿಟಿವ್

Update: 2021-04-12 04:54 GMT

ಹೊಸದಿಲ್ಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಕೋವಿಡ್-19 ಬಿಕ್ಕಟ್ಟು ಸುಪ್ರೀಂಕೋರ್ಟ್‍ಗೂ ತಟ್ಟಿದ್ದು ಶೇ.50ಕ್ಕೂ ಅಧಿಕ ಸಿಬ್ಬಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇನ್ನೀಗ ನ್ಯಾಯಾಧೀಶರು ಮನೆಯಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು NDTVಗೆ ತಿಳಿಸಿವೆ.

ಕೋರ್ಟ್ ರೂಮ್ ಗಳು ಸಹಿತ ಸಂಪೂರ್ಣ ನ್ಯಾಯಾಲಯ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಲಾಗಿದೆ. ಹಲವು ನ್ಯಾಯಪೀಠಗಳು ಇಂದು ನಿಗದಿತ ಸಮಯಕ್ಕಿಂತ ಒಂದು ಗಂಟೆ ವಿಳಂಬವಾಗಿ ತಮ್ಮ ಕಲಾಪವನ್ನು ಆರಂಭಿಸಲಿವೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಒಂದೇ ದಿನ 44 ಸಿಬ್ಬಂದಿಗಳಿಗೆ ಕೊರೋನ ಸೋಂಕು ತಗಲಿದೆ ಎಂದು ಮೂಲಗಳು ತಿಳಿಸಿವೆ.

ನನ್ನ ಹೆಚ್ಚಿನ ಸಿಬ್ಬಂದಿ ಹಾಗೂ ಲಾ ಕ್ಲರ್ಕ್‍ಗಳಿಗೆ ಕೊರೋನ ಸೋಂಕು ಬಾಧಿಸಿದೆ ಎಂದು ಓರ್ವ ನ್ಯಾಯಾಧೀಶರು ಎನ್ ಡಿಟಿವಿಗೆ ತಿಳಿಸಿದ್ದಾರೆ. ಹೆಚ್ಚಿನ ನ್ಯಾಯಾಧೀಶರಿಗೆ ಈ ಹಿಂದೆ ಕೊರೋನ ಸೋಂಕು ಬಾಧಿಸಿದ್ದು, ಅದರಿಂದ ಎಲ್ಲರೂ ಚೇತರಿಸಿಕೊಂಡಿದ್ದಾರೆ. 

ಭಾರತದಲ್ಲೀಗ ಕೊರೋನದ ಎರಡನೇ ಅಲೆಯ ಆರ್ಭಟ ಜೋರಾಗಿದ್ದು, ಕಳೆದ ವಾರದಲ್ಲಿ ಸುಮಾರು 10 ಲಕ್ಷ ಹೊಸ ಕೇಸ್ ಗಳು ವರದಿಯಾಗಿವೆ. ಇಂದು ಸತತ ಆರನೇ ದಿನ ದೈನಂದಿನ ಪ್ರಕರಣಗಳ ಸಂಖ್ಯೆ 1,68,912ಕ್ಕೆ ಏರಿದೆ. ಇದು ದೈನಂದಿನ ಕೇಸ್ ನಲ್ಲಿ ಗರಿಷ್ಟವಾಗಿದೆ. ಕಳೆದ 24 ಗಂಟೆಗಳಲ್ಲಿ ಕೊರೋನ ಸಂಬಂಧಿಸಿದ ಸಮಸ್ಯೆಯಿಂದಾಗಿ 904 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಂದು ಬೆಳಗ್ಗೆ ಆರೋಗ್ಯ ಸಚಿವಾಲಯ ನೀಡಿರುವ ಅಂಕಿ-ಅಂಶದಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News