ಕೋವಿಡ್-19 ಪರಿಸ್ಥಿತಿ: ಗುಜರಾತ್ ಸರಕಾರದ ನೀತಿಗಳ ಬಗ್ಗೆ ಹೈಕೋರ್ಟ್ ಅಸಮಾಧಾನ
ಹೊಸದಿಲ್ಲಿ: ರಾಜ್ಯದಲ್ಲಿ ಹದಗೆಡುತ್ತಿರುವ ಕೋವಿಡ್-19 ಪರಿಸ್ಥಿತಿಯ ಕುರಿತು ಸಲ್ಲಿಕೆಯಾಗಿರುವ ಸುಮೋಟೊ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಗುಜರಾತ್ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಕೊರೋನ ನಿಯಂತ್ರಿಸಲು ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಎಪ್ರಿಲ್ 15ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿದೆ.
ಅರ್ಜಿಯ ಆನ್ ಲೈನ್ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ವಿಕ್ರಮ್‍ನಾಥ್ ಅವರ ನ್ಯಾಯಪೀಠವು ಪ್ರಕರಣಗಳು ಹಾಗೂ ಸಾವುಗಳ ಹೆಚ್ಚಳದ ಮಧ್ಯೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಕುರಿತಾಗಿ ರಾಜ್ಯ ಸರಕಾರದ ‘ಕೆಲವು ನೀತಿಗಳ’ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ತಪ್ಪುಗಳನ್ನು ತಿದ್ದುಕೊಳ್ಳುವ ಅಗತ್ಯವಿದೆ ಎಂದು ಹೇಳಿತು.
ನಾವೀಗ ಮೂರನೇ ಹಂತದಲ್ಲಿದ್ದೇವೆ. ನೀವು ಪರೀಕ್ಷೆಗೆ ಅರ್ಜಿ ಸಲ್ಲಿಸಿದರೆ ಹಲವಾರು ದಿನಗಳ ನಂತರ ನಮಗೆ ವರದಿ ಸಿಗುತ್ತದೆ. ಆರ್ ಟಿ-ಪಿಸಿ ಆರ್ ವರದಿ ಪಡೆಯಲು ಸುಮಾರು 7 ದಿನಗಳು ಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಟೀಕಿಸಿದರು.
ವಾಸ್ತವವಾಗಿ ಕೋವಿಡ್-19 ಪರಿಸ್ಥಿತಿಯನ್ನು ರಾಜ್ಯದಲ್ಲಿ ಆರೋಗ್ಯ ತುರ್ತು ಸ್ಥಿತಿ ಎಂದು ಹೇಳಿದ್ದ ಮುಖ್ಯ ನ್ಯಾಯಮೂರ್ತಿ ರವಿವಾರ ಸಂಜೆ ಈ ವಿಚಾರವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸೋಮವಾರ ತುರ್ತಾಗಿ ವಿಚಾರಣೆ ನಡೆಸಲು ನಿರ್ಧರಿಸಿತು.
ರೆಮೆಡೆಸಿವಿರ್ ಚುಚ್ಚುಮದ್ದು ಕೊರತೆ ಹಾಗೂ ಇಂಜೆಕ್ಷನ್ ಬಾಟಲುಗಳನ್ನು ಸಂಗ್ರಹಿಸಲು ಆಸ್ಪತ್ರೆಗಳ ಹೊರಗೆ ರೋಗಿಗಳ ಉದ್ದನೆಯ ಸರದಿ ಸಾಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ಮುಂದಿನ ವಿಚಾರಣೆ ನಡೆಯುವ ಎಪ್ರಿಲ್ 15ಕ್ಕೆ ಮೊದಲು ಇಂಜೆಕ್ಷನ್ ದಾಸ್ತಾನಿನ ಬಗ್ಗೆ ಅಂಕಿಅಂಶವನ್ನು ನ್ಯಾಯಾಲಯದ ಮುಂದೆ ಇಡುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯನ್ಯಾಯಮೂರ್ತಿ, ಅಡ್ವಕೇಟ್ ಜನರಲ್ ಅವರನ್ನು ಕೇಳಿದರು.
ಅಡ್ವಕೇಟ್ ಜನರಲ್ ಅವರು ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು, ಹೆಚ್ಚುವರಿ ಹಾಸಿಗೆಗಳು ಇತರ ಸೌಕರ್ಯಗಳನ್ನು ಹೇಗೆ ಹೆಚ್ಚಿಸುತ್ತಿದೆ ಎಂಬುದರ ಬಗ್ಗೆ ವಿವರಿಸಿದರು. ಆದರೆ ಮಾಧ್ಯಮ ವರದಿಗಳು ವಾಸ್ತವ ಸ್ಥಿತಿಯನ್ನು ಮೀರಿಸುತ್ತಿವೆ ಎಂದರು .