ಕೋಲ್ಕತಾ: ಐಐಎಂನ 61 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ

Update: 2021-04-12 16:28 GMT

ಕೋಲ್ಕತಾ, ಎ.12: ಪ್ರತಿಷ್ಟಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕಲ್ಕತಾದ 61 ವಿದ್ಯಾರ್ಥಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಮಾರ್ಚ್ ಅಂತ್ಯದ ವೇಳೆ ಸೋಂಕಿನ ಲಕ್ಷಣ ಕಂಡುಬಂದ ವಿದ್ಯಾರ್ಥಿಗಳನ್ನು ಸಂಸ್ಥೆಯ 2 ಕಟ್ಟಡಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಮೂವರು ವೈದ್ಯರು ನಿರಂತರ ಆರೋಗ್ಯ ತಪಾಸಣೆ ನಡೆಸುತ್ತಿದ್ದು ಕೋಲ್ಕತಾದ ಉನ್ನತ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದ್ದು ಕ್ವಾರಂಟೈನ್ ಸಂದರ್ಭ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿರಂತರ ಸಲಹೆ ಪಡೆಯಲಾಗುತ್ತಿದೆ ಎಂದು ಕಲ್ಕತಾ ಐಐಎಂನ ಕೋವಿಡ್-19 ಸಮಿತಿಯ ಅಧ್ಯಕ್ಷ ಪ್ರೊ ಪ್ರಶಾಂತ್ ಮಿಶ್ರಾ ಹೇಳಿದ್ದಾರೆ. ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರುವ ವಿದ್ಯಾರ್ಥಿಗಳಿಗಷ್ಟೇ ಕ್ಯಾಂಪಸ್‌ಗೆ ಪ್ರವೇಶ ನೀಡಲಾಗಿತ್ತು.

ಜನವರಿ 15ರ ವೇಳೆಗೆ ಸುಮಾರು 900 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿದ್ದು ಇವರೆಲ್ಲರ ಬಳಿ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಇತ್ತು. ಮಾರ್ಚ್ ಅಂತ್ಯದ ವೇಳೆಗೆ ಸೋಂಕಿನ ಸಮಸ್ಯೆ ಕಾಣಿಸಿಕೊಂಡಿದೆ. ಇತ್ತೀಚೆಗೆ ನಡೆದ ಹೋಳಿ ಸಂಭ್ರಮಾಚರಣೆ ಸಂದರ್ಭ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ. ಎಪ್ರಿಲ್ 1ರಿಂದ 570ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ತೊರೆದಿದ್ದಾರೆ. ಇನ್ನೂ 335 ವಿದ್ಯಾರ್ಥಿಗಳು(ಸೋಂಕಿತ 61 ವಿದ್ಯಾರ್ಥಿಗಳ ಸಹಿತ)ಕ್ಯಾಂಪಸ್‌ನಲ್ಲಿದ್ದಾರೆ. ಸೋಂಕಿತರಲ್ಲಿ ಸೌಮ್ಯ ಲಕ್ಷಣವಿದೆ. ಇನ್ನೂ 30 ವಿದ್ಯಾರ್ಥಿಗಳ ಪರೀಕ್ಷೆಯ ವರದಿ ಬರಬೇಕಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News