ಕೇಂದ್ರ ಪಡೆಗಳು ನಾಲ್ಕಲ್ಲ, 8 ಮಂದಿಯನ್ನು ಕೊಲ್ಲಬೇಕಿತ್ತು: ಬಿಜೆಪಿ ನಾಯಕ ರಾಹುಲ್ ಸಿನ್ಹಾ

Update: 2021-04-12 17:42 GMT

ಕೋಲ್ಕತಾ: ಕೇಂದ್ರ ರಕ್ಷಣಾ ಪಡೆಗಳು ಕೂಚ್ ಬಿಹಾರ್ ನ ಸಿಟಾಲ್ಕುಚಿಯಲ್ಲಿ ನಾಲ್ಕಲ್ಲ 8 ಮಂದಿಯನ್ನು ಗುಂಡಿಟ್ಟು ಕೊಲ್ಲಬೇಕಿತ್ತು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ಸೋಮವಾರ ಹೇಳಿದ್ದಾರೆ ಎಂದು ಆನಂದ್ ಬಝಾರ್ ಪತ್ರಿಕೆ ವರದಿ ಮಾಡಿದೆ.

ಸಿಟಾಲ್ಕುಚಿ ತರಹದ ಇನ್ನಷ್ಟು ಘಟನೆಗಳು ನಡೆಯುತ್ತವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಷ್ ಎಚ್ಚರಿಕೆ ನೀಡಿದ ಮರುದಿನವೇ ಸಿನ್ಹಾ ಹೇಳಿಕೆ ನೀಡಿದ್ದಾರೆ.

ಎಪ್ರಿಲ್ 10ರಂದು ನಡೆದ 4ನೇ ಹಂತದ ಮತದಾನದ ವೇಳೆ ಹಿಂಸಾಚಾರ ನಡೆದಿದ್ದು, ನಾಲ್ವರು ಮತದಾರರನ್ನು ಭದ್ರತಾ ಪಡೆ ಸಿಬ್ಬಂದಿ ಎದೆಗೆ ಗುಂಡಿಟ್ಟು ಸಾಯಿಸಿತ್ತು.

“ನಾಲ್ಕು ಮಂದಿಯಲ್ಲ, 8 ಮಂದಿಯನ್ನು ಸಿಟಾಲ್ಕುಚಿಯಲ್ಲಿ ಗುಂಡಿಟ್ಟು ಸಾಯಿಸಬೇಕಾಗಿತ್ತು. ನೀವೇಕೆ ನಾಲ್ಕುಮಂದಿಯನ್ನು ಕೊಂದಿದ್ದು, 8 ಮಂದಿಯನ್ನು ಏಕೆ ಕೊಂದಿಲ್ಲ ಎಂದು ಕೇಂದ್ರ ಭದ್ರತಾ ಪಡೆಗಳಿಗೆ ಶೋಕಾಸ್ ನೋಟಿಸ್ ನೀಡಬೇಕಾಗಿತ್ತು. ಬಿಜೆಪಿಗೆ ಬೆಂಬಲ ನೀಡುತ್ತಿದ್ದ 18 ವರ್ಷದ ಯುವಕನನ್ನು ಮತಗಟ್ಟೆ ಬಳಿ ಗುಂಡಿಟ್ಟು ಸಾಯಿಸಲಾಗಿತ್ತು. ಗುಂಡಿಟ್ಟವರ ನಾಯಕಿ ಮಮತಾ ಬ್ಯಾನರ್ಜಿ” ಎಂದು ತಾನು ಸ್ಪರ್ಧಿಸುತ್ತಿರುವ ಹಬ್ರಾ ಕ್ಷೇತ್ರದಲ್ಲಿ ನಡೆದ ಚುನಾವಣಾ ರೋಡ್ ಶೋನಲ್ಲಿ ಹೇಳಿದ್ದಾರೆ.

"ನಾಲ್ಕಲ್ಲ 8 ಮಂದಿಯನ್ನು  ಕೊಲ್ಲಬೇಕೆಂದು ಕರೆ ನೀಡುವವರು ನಮ್ಮ ದೇಶದ ನಾಯಕರು. ಬಿಜೆಪಿಯನ್ನು ಚುನಾವಣಾ ಆಯೋಗ ನಿಷೇಧಿಸಬೇಕು. ಅದೊಂದು ಅನಾಗರಿಕ, ಹಿಂಸಾತ್ಮಕ ಪಕ್ಷ''ಎಂದು ಟಿಎಂಸಿ ನಾಯಕಿ ಹಾಗೂ ಸಚಿವೆ ಜ್ಯೋತಿ ಪ್ರಿಯ ಮಲಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News