ಗರಿಷ್ಠ ಕೋವಿಡ್19 ಸೋಂಕು : ಭಾರತಕ್ಕೀಗ ಎರಡನೇ ಸ್ಥಾನ

Update: 2021-04-13 03:47 GMT

ಹೊಸದಿಲ್ಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1.60 ಲಕ್ಷಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಪ್ರಕರಣಗಳಲ್ಲಿ ಬ್ರೆಝಿಲ್ ದೇಶವನ್ನು ಹಿಂದಿಕ್ಕಿದೆ. ಇದೀಗ ಭಾರತ ವಿಶ್ವದಲ್ಲೇ ಅಮೆರಿಕ ಹೊರತುಪಡಿಸಿದರೆ ಗರಿಷ್ಠ ಪ್ರಕರಣಗಳು ವರದಿಯಾದ ದೇಶ ಎನಿಸಿಕೊಂಡಿದೆ.

ಒಂದು ದಿನದಲ್ಲಿ ದೇಶದಲ್ಲಿ ಸುಮಾರು 1.7 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,35,25,153ಕ್ಕೇರಿದೆ. ಬ್ರೆಝಿಲ್‌ನಲ್ಲಿ ಇದುವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 1,34,82,543. ಬ್ರೆಝಿಲ್‌ನಲ್ಲಿ ರವಿವಾರ 38 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷದ ಸೆಪ್ಟೆಂಬರ್ 6ರಂದು ಮೊದಲ ಬಾರಿಗೆ ಬ್ರೆಝಿಲ್ ದೇಶವನ್ನು ಹಿಂದಿಕ್ಕಿತ್ತು. ಆದರೆ ಎರಡನೇ ಅಲೆಯಲ್ಲಿ ಮತ್ತೆ ಬ್ರೆಝಿಲ್ ಭಾರತವನ್ನು ಹಿಂದಿಕ್ಕಿತ್ತು.

ಈ ಮಧ್ಯೆ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 11,496 ಹೊಸ ಪ್ರಕರಣಗಳು ವರದಿಯಾಗಿವೆ. ಇದು ರವಿವಾರ ದಾಖಲಾದ 10774 ಪ್ರಕರಣಗಳಿಗೆ ಹೋಲಿಸಿದರೆ ಶೇಕಡ 7ರಷ್ಟು ಅಧಿಕ. ಇದು ರಾಜಧಾನಿಯಲ್ಲಿ ದಾಖಲಾದ ಗರಿಷ್ಠ ಪ್ರಕರಣವಾಗಿದೆ. ಅಂತೆಯೇ ರಾಜಧಾನಿಯಲ್ಲಿ ಪ್ರಕರಣ ಹೆಚ್ಚಳ ಪ್ರಮಾಣ 9.43%ದಿಂದ 12.44%ಕ್ಕೆ ಹೆಚ್ಚಿದೆ. ಮುಂಬೈ ಮಹಾನಗರದಲ್ಲಿ ಕಳೆದ ಎರಡು ದಿನಗಳಲ್ಲಿ ಕ್ರಮವಾಗಿ 9986 ಮತ್ತು 6893 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಪಟ್ಟು 51751 ಹೊಸ ಪ್ರಕರಣಗಳು ವರದಿಯಾಗಿದ್ದು, 258 ಸೋಂಕಿತರು ಮೃತಪಟ್ಟಿದ್ದಾರೆ.

ಎರಡನೇ ಅಲೆಯ ಹೊಡೆತದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಭೋಪಾಲ್‌ನಲ್ಲಿ ಎ. 12ರಿಂದ 19ರವರೆಗೆ ಕರ್ಫ್ಯೂ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News