ಕೊರೋನ ತಡೆಗೆ ಎರಡು ಮಾಸ್ಕ್ ಬಳಸಿ : ತಜ್ಞರ ಸಲಹೆ

Update: 2021-04-13 03:58 GMT
ಫೈಲ್ ಫೋಟೊ

ಹೊಸದಿಲ್ಲಿ : ದೇಶದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಅಧಿಕ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದರ ಮೇಲೊಂದರಂತೆ ಎರಡು ಮಾಸ್ಕ್‌ಗಳನ್ನು ಬಳಸುವ ಮೂಲಕ ವೈರಸ್ ವರ್ಗಾವಣೆ ತಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರುಕಟ್ಟೆಗಳಲ್ಲಿ ಎರಡು ಮಾಸ್ಕ್ ಧರಿಸಿದವರ ಸಂಖ್ಯೆ ಅಧಿಕವಾಗಿ ಕಂಡುಬರುತ್ತಿದೆ. "ಒಂದು ಸರ್ಜಿಕಲ್ ಮಾಸ್ಕ್ ಹಾಗೂ ಒಂದು ಬಟ್ಟೆಯ ಮಾಸ್ಕ್ ಅಥವಾ ಬಟ್ಟೆಯ ಎರಡು ಮಾಸ್ಕ್‌ಗಳನ್ನು ಧರಿಸಬಹುದು. ಆದಾಗ್ಯೂ ಎನ್95 ಮಾಸ್ಕ್‌ಗಳಾದರೆ ಎರಡು ಧರಿಸುವುದು ಅಗತ್ಯವಿಲ್ಲ" ಎಂದು ದೆಹಲಿಯ ಮ್ಯಾಕ್ಸ್ ಸಾಕೇತ್ ಆಸ್ಪತ್ರೆಯ ಆಂತರಿಕ ಔಷಧಿ ವಿಭಾಗದ ನಿರ್ದೇಶಕ ಡಾ.ರೊಮೆಲ್ ಟಿಕ್ಕೂ ಹೇಳುತ್ತಾರೆ.

"ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಸಾಧ್ಯವಿಲ್ಲದಂಥ ಜನದಟ್ಟಣೆಯ ಪ್ರದೇಶಗಳಿಗೆ ಹೋಗುವಾಗ ಎರಡು ಮಾಸ್ಕ್‌ಗಳನ್ನು ಧರಿಸುವುದು ಸೂಕ್ತ" ಎಂದು ಅವರು ಹೇಳುತ್ತಾರೆ.

"ಹಲವು ಮಾಸ್ಕ್‌ಗಳು ಮುಖಕ್ಕೆ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಎರಡು ಮಾಸ್ಕ್‌ಗಳನ್ನು ಧರಿಸುವುದರಿಂದ ಸೋಂಕಿತ ವ್ಯಕ್ತಿಯ ಸೂಕ್ಷ್ಮ ಹನಿಗಳು ಆತನ ಉಸಿರಾಟದ ಮೂಲಕ ಹೊರಬರುವ ವೇಳೆ ನಾವು ಉಸಿರಾಡುವ ಗಾಳಿಯಲ್ಲಿ ನಮ್ಮ ದೇಹ ಸೇರುವ ಸಾಧ್ಯತೆ ಕಡಿಮೆ ಯಾಗುತ್ತದೆ" ಎಂದು ತಜ್ಞರು ವಿವರಿಸುತ್ತಾರೆ.

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಸಂಸ್ಥೆ (ಸಿಡಿಸಿ) ನಡೆಸಿದ ಅಧ್ಯಯನವನ್ನು ಆಧರಿಸಿ ತಜ್ಞರು ಈ ಶಿಫಾರಸ್ಸು ಮಾಡಿದ್ದಾರೆ. ವೈದ್ಯಕೀಯ ಪ್ರಕ್ರಿಯೆ ನಡೆಸುವಾಗ ಧರಿಸುವ ಮಾಸ್ಕ್‌ಗಳು ಹೆಚ್ಚು ಹೊಂದಿಕೆಯಾಗುವಂತೆ ಹೇಗೆ ಮಾಡಬಹುದು ಎಂಬ ಬಗ್ಗೆ ಸಿಡಿಸಿ ಪ್ರಯೋಗ ನಡೆಸಿತ್ತು. ಈ ಪೈಕಿ ಸರ್ಜಿಕಲ್ ಮಾಸ್ಕ್‌ನ ಮೇಲೆ ಬಟ್ಟೆಯ ಮಾಸ್ಕ್ ಧರಿಸುವುದು ಒಂದು ವಿಧಾನ. ಇದರಿಂದ ಮಾಸ್ಕ್ ಮುಖಕ್ಕೆ ಹೆಚ್ಚು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಜನರಿಗೆ ಇದರಿಂದ ಉಸಿರಾಟ ಸ್ವಲ್ಪ ಕಷ್ಟಸಾಧ್ಯವಾಗಬಹುದು. ಆದ್ದರಿಂದ ನಿಯತವಾಗಿ ಎರಡು ಮಾಸ್ಕ್ ಬಳಕೆ ಸೂಕ್ತವಲ್ಲ ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಸದಸ್ಯ ಡಾ. ಶಶಾಂಕ್ ಜೋಶಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News