ಭಾರತದಲ್ಲಿ ಕೋವಿಡ್ 2ನೆ ಅಲೆಯ ಬೆಳವಣಿಗೆಯು ಆತಂಕಕಾರಿಯಾಗಿದೆ: ಕೇಂದ್ರ ಸರಕಾರ

Update: 2021-04-13 14:45 GMT

ಹೊಸದಿಲ್ಲಿ: ಕಳೆದ ವರ್ಷಕ್ಕಿಂತ ಅತ್ಯಧಿಕ ರೀತಿಯಲ್ಲಿ ಕೊರೋನ ವೈರಸ್‌ ಹರಡುತ್ತಿದ್ದು, ಸೋಂಕುಗಳ ಪ್ರವೃತ್ತಿಯು ಕಳವಳಕ್ಕೆ ಕಾರಣವಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ. ಎರಡನೇ ಅಲೆಯು ಹರಡುತ್ತಿರುವ ರೀತಿ ಮತ್ತು ಅದರ ಪ್ರವೃತ್ತಿಯು ʼಆತಂಕಕಾರಿಯಾಗಿದೆʼ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿಕೆ ನೀಡಿದ್ದಾರೆ.

"ನಮ್ಮಲ್ಲಿ 89.51% ಜನರು ಗುಣಮುಖರಾಗಿದ್ದಾರೆ, 1.25% ಸಾವುಗಳು ಮತ್ತು 9.24% ಸಕ್ರಿಯ ಪ್ರಕರಣಗಳಿವೆ. ಈಗಿನ ನೂತನ ಪ್ರಕರಣಗಳನ್ನು ಗಮನಿಸಿದರೆ ಹಿಂದಿನ ಅತ್ಯಧಿಕ ಉಲ್ಬಣವನ್ನು ಅದು ಈಗಾಗಲೇ ದಾಟಿದೆ ಮತ್ತು ವೇಗವಾಗಿ ಹರಡುತ್ತಿದೆ. ಇದು ನಮ್ಮ ಚಿಂತೆಗೆ ಕಾರಣವಾಗಿದೆ" ಎಂದು ಭೂಷಣ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಕೋವಿಡ್ -19 ಸಾವುಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ದಾಖಲಿಸುತ್ತಿವೆ. ಆದರೆ ಕಳೆದ ವರ್ಷ ಭಾರತದಲ್ಲಿ ಮೊದಲ ಕೊರೋನ ಅಲೆಯ ಸಂದರ್ಭದಲ್ಲಿ ಕಂಡುಬಂದ ಅತಿ ಹೆಚ್ಚು ಸಂಖ್ಯೆಯನ್ನು ಇನ್ನೂ ದಾಟಿಲ್ಲ ಎಂದು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿ ತಿಳಿಸಿದ್ದಾರೆ. ಇಲ್ಲಿಯವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು 13,10,90,370 ಲಸಿಕೆ ಪ್ರಮಾಣವನ್ನು ಸ್ವೀಕರಿಸಿದ್ದು, ವ್ಯರ್ಥ ಸೇರಿದಂತೆ ಒಟ್ಟು 11,43,69,677 ಪ್ರಮಾಣಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News