ಎನ್ ಡಿಎ ತೊರೆದ ಗೋವಾ ಫಾರ್ವರ್ಡ್ ಪಾರ್ಟಿ

Update: 2021-04-13 17:18 GMT

ಪಣಜಿ: ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ ಪಿ)ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ(ಎನ್ ಡಿಎ)ದಿಂದ ಅಧಿಕೃತವಾಗಿ ಹೊರ ನಡೆಯುತ್ತಿದೆ. ರಾಜ್ಯ ಸರಕಾರವು ಗೋವಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಇದು ರಾಜ್ಯದ ಅನನ್ಯತೆ, ಜೀವನ ಪರಂಪರೆ, ಪರಿಸರ ಹಾಗೂ ಜೀವನೋಪಾಯವನ್ನು ಹಾನಿಗೊಳಿಸಿದೆ ಎಂದು ಬಿಎಫ್ ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಮಂಗಳವಾರ ಘೋಷಿಸಿದರು.

ಎನ್ ಡಿಎ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಸರ್ದೇಸಾಯಿ, ಎನ್ ಡಿಎಯೊಂದಿಗಿನ ನಮ್ಮ ಸಂಬಂಧವು ಜುಲೈ 2019ರಲ್ಲಿ ಕೊನೆಗೊಂಡಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನು ಮರುಪರಿಶೀಲನೆಗೆ ಅವಕಾಶವಿಲ್ಲ. ನಮ್ಮ ಪ್ರಜಾಪ್ರಭುತ್ವದ ಬದ್ಧತೆಗಳು, ಗೋವಾ ಜನರ ಇಚ್ಛೆಗೆ ಅನುಗುಣವಾಗಿದ್ದು ನಾವು ಎನ್ ಡಿಎಯಲ್ಲಿ ಭಾಗವಹಿಸುವುದನ್ನು ಕೊನೆಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಸರಕಾರದಲ್ಲಿ ಸಂಪುಟ ಸಚಿವರಾಗಿದ್ದ ಸರ್ದೇಸಾಯಿ ಮಂಗಳವಾರ ತನ್ನ ಕಾರ್ಯಕಾರಿ ಸಮಿತಿ ನಿರ್ಣಯವನ್ನು ಅಂಗೀಕರಿಸಿದ ಬಳಿಕ ಪಕ್ಷದ ನಿರ್ಧಾರವನ್ನು ಪ್ರಕಟಿಸಿದರು.

ಮಾರ್ಗೊವಾ ಮುನ್ಸಿಪಲ್ ಕೌನ್ಸಿಲ್ ಚುನಾವಣೆಗೆ ಸ್ಪರ್ಧಿಸಲು ಜಿಎಫ್ ಪಿ ಹಾಗೂ ಕಾಂಗ್ರೆಸ್ ಕೈಜೋಡಿಸಿರುವ ಸಮಯದಲ್ಲಿ ರಾಜ್ಯದ 5 ಪುರಸಭೆಗಳಲ್ಲಿ ಮುನ್ಸಿಪಲ್ ಕೌನ್ಸಿಲ್ ಚುನಾವಣೆಗೆ ಮುನ್ನ ಈ ಪ್ರಕಟನೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News