"ನಾವು ಎರಡನೇ ದರ್ಜೆ ನಾಗರಿಕರಲ್ಲ, ಸರಕಾರದ ವಿರುದ್ಧ ನಿರ್ಭೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿ"

Update: 2021-04-14 12:34 GMT

ಹೊಸದಿಲ್ಲಿ: ತಮ್ಮನ್ನು 'ಎರಡನೇ ದರ್ಜೆ ನಾಗರಿಕರಂತೆ' ಪರಿಗಣಿಸುವುದನ್ನು ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕೆಂದು ಹಾಗೂ ತಮಗೆ ಸರಕಾರದ ವಿರುದ್ಧದ ಅಭಿಪ್ರಾಯಗಳನ್ನು  ನಿರ್ಭೀತಿಯಿಂದ ವ್ಯಕ್ತಪಡಿಸಲು ಅವಕಾಶ ನೀಡಬೇಕೆಂದು ಕೋರಿ 80 ಮಂದಿ ಸಾಗರೋತ್ತರ ಭಾರತೀಯ ನಾಗರಿಕರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದಾರೆ.

ಭಾರತೀಯ ಮೂಲದ ವಿದೇಶೀಯರಿಗೆ ಭಾರತದಲ್ಲಿ ಅನಿರ್ದಿಷ್ಟಾವಧಿ ಉಳಿದುಕೊಂಡು ಇಲ್ಲಿಯೇ ಉದ್ಯೋಗ ಮಾಡಲು ಅನುಮತಿಸುವ ಉದ್ದೇಶದಿಂದ ಸರಕಾರ ಓವರ್‍ಸೀಸ್ ಸಿಟಿಜನ್‍ಶಿಪ್ ಆಫ್ ಇಂಡಿಯಾ ಅಥವಾ ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ಒದಗಿಸುತ್ತದೆ. ಆದರೆ ಹೆತ್ತವರು, ತಾತ, ಮುತ್ತಾತಂದಿರು ಪಾಕಿಸ್ತಾನೀಯರಾಗಿದ್ದರೆ ಅಂತಹವರಿಗೆ ಈ ಕಾರ್ಡ್ ಪಡೆಯುವ ಅವಕಾವಿಲ್ಲ.

ಸಾಗರೋತ್ತರ ಭಾರತೀಯ ನಾಗರಿಕರು ಇಲ್ಲಿ ಉದ್ಯೋಗ ಮಾಡಿಕೊಂಡು ತೆರಿಗೆ ಪಾವತಿಸಿ ದೇಶಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದರೂ ಅವರು ತಮ್ಮ ಸ್ಥಾನಮಾನ ಕಳೆದುಕೊಳ್ಳುವ ಭೀತಿಯಲ್ಲಿಯೇ ಬದುಕುತ್ತಿದ್ದಾರೆ ಎಂದು ಸೋಮವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿರುವ ಅಪೀಲಿನಲ್ಲಿ ಹೇಳಲಾಗಿದೆ.

ಒಸಿಐ ಸ್ಥಾನಮಾನವನ್ನು ರದ್ದುಗೊಳಿಸಲು ಭಾರತ ಸರಕಾರಕ್ಕಿರುವ ಅಧಿಕಾರವನ್ನೂ  ಅಪೀಲಿನಲ್ಲಿ ಉಲ್ಲೇಖಿಸಲಾಗಿದೆ. ಅಪೀಲು ಸಲ್ಲಿಸಿದ 80 ಮಂದಿಯಲ್ಲಿ 57 ಮಂದಿ ಬೆಂಗಳೂರಿನವರೆಂಬುದು ಉಲ್ಲೇಖಾರ್ಹ.

ಪೌರತ್ವ ಕಾಯಿದೆಯ ಸೆಕ್ಷನ್ 7ಡಿ ಅನ್ವಯ ಸಾಗರೋತ್ತರ ಭಾರತೀಯ ನಾಗರಿಕರು  ಕಾನೂನು ಉಲ್ಲಂಘಿಸಿದರೆ ಅಥವಾ ಸಂವಿಧಾನಕ್ಕೆ ಅಗೌರವ ತೋರಿದರೆ ಅವರ ಒಸಿಐ ಸ್ಥಾನಮಾನವನ್ನು ರದ್ದುಗೊಳಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ ಎಂಬುದನ್ನು  ಅಪೀಲಿನಲ್ಲಿ ಉಲ್ಲೇಖಿಸಲಾಗಿದೆ. ಇದು ಒಸಿಐ ಸ್ಥಾನಮಾನ ಹೊಂದಿರುವವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ  ಪರಿಣಾಮ ಬೀರುತ್ತದೆ. 

ಅವರು ಶಾಂತಿಯುತವಾಗಿ ಸರಕಾರದ ವಿರುದ್ಧ ಪ್ರತಿಭಟಿಸಿದರೂ ಅದನ್ನು ನಿಯಮ ಉಲ್ಲಂಘನೆ ಎಂದು ತಿಳಿದು ಅವರ ಒಸಿಐ ಸ್ಥಾನಮಾನ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಅಪೀಲಿನಲ್ಲಿ ಹೇಳಲಾಗಿದೆ, ಅವರಿಗೆ ಆರ್‍ಟಿಐ ಅನ್ವಯ ವಿವರಗಳನ್ನು ಪಡೆಯುವ ಹಕ್ಕು ಕೂಡ ಇಲ್ಲ ಹಾಗೂ ಅವರು ಕೈಗೊಳ್ಳಬಹುದಾದ ವೃತ್ತಿಗಳ ಕುರಿತಾದ ಕೆಲ ನಿರ್ಬಂಧಗಳೂ ಇವೆ, ಎಂದು ಅಪೀಲಿನಲ್ಲಿ ಉಲ್ಲೇಖಿಸಲಾಗಿದೆ.

ಈ ಅಪೀಲಿನ ಕುರಿತಂತೆ ಕೇಂದ್ರ ಸರಕಾರಕ್ಕೆ ಪ್ರತಿಕ್ರಿಯಿಸಲು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ಅವರ ನೇತೃತ್ವದ ಪೀಠ ಸೂಚಿಸಿದೆ. ಒಸಿಐ ಕಾರ್ಡುದಾರರು ದೇಶದಲ್ಲಿ ಪತ್ರಿಕೋದ್ಯಮ ಚಟುವಟಿಕೆಗಳಲ್ಲಿ ತೊಡಗಬೇಕಾದರೆ ಸರಕಾರದ ವಿಶೇಷ ಅನುಮತಿ ಪಡೆಯಬೇಕೆಂದು ಮಾರ್ಚ್ 4ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸೂಚಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News