“ಮುಂಬೈ ರೈಲು ಸ್ಫೋಟಗಳ ಬಗ್ಗೆ ಯಾವುದೇ ವರದಿಯನ್ನು ಗೃಹಸಚಿವಾಲಯಕ್ಕೆ ಸಲ್ಲಿಸಿರಲಿಲ್ಲ”

Update: 2021-04-14 15:10 GMT

ಹೊಸದಿಲ್ಲಿ, ಎ.14: ಮುಂಬೈ ರೈಲು ಸ್ಫೋಟಗಳ ಬಗ್ಗೆ 2009ರಲ್ಲಿ ತಾನು ಯಾವುದೇ ವರದಿಯನ್ನು ಸಿದ್ಧಪಡಿಸಿರಲಿಲ್ಲ ಅಥವಾ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರಲಿಲ್ಲ ಎಂದು ಗುಪ್ತಚರ ಸಂಸ್ಥೆ (ಐಬಿ)ಯು ಕೇಂದ್ರ ಸರಕಾರದ ವಕೀಲ ರಾಹುಲ್ ಶರ್ಮಾ ಮೂಲಕ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. 2006, ಜು.11ರಂದು ಮುಂಬೈನ ಪಶ್ಚಿಮ ರೈಲ್ವೆಯ ಏಳು ಲೋಕಲ್ ರೈಲುಗಳಲ್ಲಿ ಏಳು ಆರ್‌ಡಿಎಕ್ಸ್ ಬಾಂಬ್‌ಗಳು ಸ್ಫೋಟಿಸಿದ್ದು,189 ಜನರು ಕೊಲ್ಲಲ್ಪಟ್ಟಿದ್ದರು ಮತ್ತು 829 ಜನರು ಗಾಯಗೊಂಡಿದ್ದರು.

ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ದಳವು ಈ ಪ್ರಕರಣದ ತನಿಖೆಯನ್ನು ನಡೆಸಿತ್ತು ಎಂದೂ ಐಬಿ ತಿಳಿಸಿದೆ.

 2006ರ ಮುಂಬೈ ಸರಣಿ ರೈಲು ಸ್ಫೋಟಗಳ ಬಗ್ಗೆ 2009ರಲ್ಲಿ ಅಥವಾ ಅದರ ನಂತರ ತಾನು ಯಾವುದೇ ವರದಿಯನ್ನು ಸಿದ್ಧಗೊಳಿಸಿರಲಿಲ್ಲ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾ.ಪ್ರತಿಭಾ ಸಿಂಗ್ ಅವರು ಜ.27ರಂದು ಐಬಿಗೆ ಸೂಚಿಸಿದ್ದರು.

ಸರಣಿ ರೈಲು ಸ್ಫೋಟಗಳಿಗಾಗಿ ಮರಣ ದಂಡನೆಗೆ ಗುರಿಯಾಗಿರುವ ಎಹ್ತೆಶಾಮ್ ಕುತ್ಬುದ್ದೀನ್ ಸಿದ್ದಿಕಿ 2009ರ ಐಬಿ ವರದಿಗಾಗಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ಸಿಂಗ್ ಈ ನಿರ್ದೇಶವನ್ನು ನೀಡಿದ್ದರು. ಈ ವರದಿಯಲ್ಲಿ ಐಬಿ ಸಾಕ್ಷಾಧಾರಗಳ ಪುನರ್‌ಪರಿಶೀಲನೆಗಾಗಿ ಕರೆ ನೀಡಿತ್ತು ಎಂದು ಸಿದ್ದಿಕಿ ತನ್ನ ಅರ್ಜಿಯಲ್ಲಿ ತಿಳಿಸಿದ್ದ.

ಸಿದ್ದಿಕಿಯ ಹೇಳಿಕೆಯು ಮಾಧ್ಯಮ ವರದಿಗಳನ್ನು ಆಧರಿಸಿದೆ ಮತ್ತು ಅವುಗಳನ್ನು ಅಧಿಕೃತವೆಂದು ಸ್ವೀಕರಿಸಲಾಗುವುದಿಲ್ಲ ಎಂದು ಐಬಿ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.

ವರದಿಯನ್ನು ಒದಗಿಸದಿರಲು ತಾನು ಆರ್‌ಟಿಐ ಕಾಯ್ದೆಯಡಿ ವಿನಾಯಿತಿಯನ್ನು ಹೊಂದಿದ್ದೇನೆ ಎಂದು ಇದೇ ವಿಷಯದಲ್ಲಿ ಈ ಹಿಂದೆ ಐಬಿ ತಿಳಿಸಿತ್ತು. ಸಿದ್ದಿಕಿ ಕೋರಿದ್ದ ಮಾಹಿತಿಯು ಭ್ರಷ್ಟಾಚಾರ ಅಥವಾ ಮಾನವ ಹಕ್ಕು ಉಲ್ಲಂಘನೆ ಅರೋಪಗಳಿಗೆ ಸಂಬಂಧಿಸಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ತಪ್ಪಾಗಿ ವರ್ಗೀಕರಿಸಿದೆ ಎಂದು ಹೇಳಿದ್ದ ಉಚ್ಚ ನ್ಯಾಯಾಲಯವು,ಆತನ ಮನವಿಯನ್ನು ಹೊಸದಾಗಿ ಪರಿಗಣಿಸುವಂತೆ ಸೂಚಿಸಿತ್ತು. ಆದರೆ ಐಬಿ ಸಿದ್ದಿಕಿ ಹೇಳಿರುವಂತೆ ಯಾವುದೇ ವರದಿಯಿಲ್ಲ ಎಂದು ತಿಳಿಸಿದ ಬಳಿಕ ಸಿಐಸಿ ಆತನ ಅರ್ಜಿಯನ್ನು 2019, ಜೂ.11ರಂದು ವಜಾಗೊಳಿಸಿತ್ತು.

2009ರ ಯಾವುದೇ ವರದಿಯಿಲ್ಲ ಎಂಬ ಐಬಿ ಹೇಳಿಕೆಯನ್ನು ಕುರುಡಾಗಿ ನಂಬುವ ಮೂಲಕ ಸಿಐಸಿ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪ್ರತಿಪಾದಿಸಿದ ಸಿದ್ದಿಕಿ,ತನ್ನ ಅರ್ಜಿಯನ್ನು ವಜಾಗೊಳಿಸಿದ್ದ ಅದರ ಆದೇಶವನ್ನು ರದ್ದುಗೊಳಿಸುವಂತೆ ಉಚ್ಚ ನ್ಯಾಯಾಲಯವನ್ನು ಕೋರಿದ್ದ.

ಹಾಲಿ ನಾಗ್ಪುರ ಜೈಲಿನಲ್ಲಿರುವ ಸಿದ್ದಿಕಿ,ತನ್ನನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ ಮತ್ತು ಇದು ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದ ಮತ್ತು 2006ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸಾಕ್ಷಾಧಾರಗಳ ಪುನರ್‌ಪರಿಶೀಲನೆ ನಡೆಯಬೇಕೆಂದು ಹೇಳಿತ್ತೆನ್ನಲಾದ ಐಬಿ ವರದಿ ತನಗೆ ಅಗತ್ಯವಾಗಿದೆ ಎಂದು ತಿಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News