ಜಾನ್ಸನ್ ಲಸಿಕೆ ಪಡೆದ ಬಳಿಕ ಓರ್ವ ಸಾವು, ಇನ್ನೊಬ್ಬ ಗಂಭಿರ

Update: 2021-04-14 15:21 GMT

ವಾಶಿಂಗ್ಟನ್, ಎ. 14: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಕೊರೋನ ವೈರಸ್ ಲಸಿಕೆ ಪಡೆದ ಬಳಿಕ ರಕ್ತ ಹೆಪ್ಪುಗಟ್ಟಿ ಅಮೆರಿಕದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಹಿರಿಯ ವಿಜ್ಞಾನಿ ಪೀಟರ್ ಮಾರ್ಕ್ಸ್ ಹೇಳಿದ್ದಾರೆ.

ಒಟ್ಟಾರೆಯಾಗಿ, ಲಸಿಕೆಯನ್ನು ತೆಗೆದುಕೊಂಡ ನಂತರದ ಆರು ಮತ್ತು 13 ದಿನಗಳ ನಡುವಿನ ಅವಧಿಯಲ್ಲಿ 18ರಿಂದ 48ರ ನಡುವಿನ ವಯಸ್ಸಿನ ಆರು ಮಹಿಳೆಯರಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಅಪರೂಪದ ಲಕ್ಷಣ ಕಂಡುಬಂದಿದೆ. ಅವರ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿಯೂ ಕಡಿತವಾಗಿದೆ.

ಲಸಿಕೆಗಳಿಗೆ ವ್ಯಕ್ತವಾಗುವ ಅತ್ಯಂತ ಅಪರೂಪದ ರೋಗನಿರೋಧಕ ಪ್ರತಿಕ್ರಿಯೆಯೊಂದು ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೀಟರ್ ಮಾರ್ಕ್ಸ್ ನುಡಿದರು.

ಆದರೆ, ಒಂದು ತಿಂಗಳು ಅಥವಾ ಅದಕ್ಕೂ ಹಿಂದೆ ಲಸಿಕೆ ತೆಗೆದುಕೊಂಡವರಲ್ಲಿ ಈ ಅಪಾಯ ಅತ್ಯಂತ ಕಡಿಮೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News