ದಿಲ್ಲಿ: ಕೋವಿಡ್ ಗೆ ಬಲಿ ಪ್ರಮಾಣದಲ್ಲಿ ಭಾರೀ ಹೆಚ್ಚಳ: ಶವಸಂಸ್ಕಾರಕ್ಕೆ ಹರಸಾಹಸ

Update: 2021-04-15 04:32 GMT
Photo credit: PTI

ಹೊಸದಿಲ್ಲಿ, ಎ.15: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ದಿಲ್ಲಿಯ ಅತಿದೊಡ್ಡ ಸ್ಮಶಾನ ನಿಗಮ್‌ಬೋಧ್ ಘಾಟ್‌ನಲ್ಲಿ ಶವಸಂಸ್ಕಾರ ನೆರವೇರಿಸಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಅಂತ್ಯ ಸಂಸ್ಕಾರವಾಗುತ್ತಿದ್ದ ಕೋವಿಡ್-19 ಸೋಂಕಿತರ ಮೃತದೇಹಗಳ ಸಂಖ್ಯೆ 15ರಿಂದ 30ಕ್ಕೇರಿದೆ.

ನವೆಂಬರ್ 20ರ ಬಳಿಕ ಅತ್ಯಧಿಕ ಅಂದರೆ 104 ಮಂದಿ ದಿಲ್ಲಿಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ದೇಶದಲ್ಲಿ 1,027 ಮಂದಿ ಜೀವ ಕಳೆದುಕೊಂಡಿದ್ದು, ಇದು 1,033 ಸಾವಿನ ಪ್ರಕರಣಗಳು ದಾಖಲಾದ ಅಕ್ಟೋಬರ್ 18ರ ಬಳಿಕ ಅತ್ಯಧಿಕ ಸಂಖ್ಯೆಯಾಗಿದೆ. ಇದರಿಂದಾಗಿ ಸ್ಮಶಾನಗಳಲ್ಲಿ ಶವಸಂಸ್ಕಾರಕ್ಕೆ ಐದಾರು ಗಂಟೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

"ನಾವು ಬೆಳಗ್ಗೆ 8:30ಕ್ಕೆ ಆಗಮಿಸಿದ್ದೇವೆ. ಆದರೆ ಇನ್ನೂ ನಮ್ಮ ಸರದಿ ಬಂದಿಲ್ಲ. ಪ್ರತಿ ಆ್ಯಂಬುಲೆನ್ಸ್‌ನಲ್ಲಿ ಎರಡು-ಮೂರು ಮೃತದೇಹಗಳನ್ನು ತರಲಾಗುತ್ತಿದೆ" ಎಂದು ಅಜ್ಜನ ಶವದೊಂದಿಗೆ ಕಾಯುತ್ತಿರುವ ಗೌತಮ್ (27) ಎಂಬವರು ವಿವರಿಸಿದರು.

ಮೃತದೇಹಗಳನ್ನು ಹೂಳುವ ವ್ಯವಸ್ಥೆ ಇರುವ ದಿಲ್ಲಿಯ ಐಟಿಓ ಬಳಿಯ ಅತಿದೊಡ್ಡ ಸ್ಮಶಾನದಲ್ಲಿ ಜೆಸಿಬಿ ಮೂಲಕ ಗೋರಿಗಳಿಗೆ ಹೊಂಡ ತೋಡುವ ಕಾರ್ಯ ನಿರಂತರವಾಗಿ ಮುಂದುವರಿದಿದೆ. ಆದರೆ ದಫನಕ್ಕೆ ಜಾಗ ಸಿಗದ ಪರಿಸ್ಥಿತಿ ಇದೆ. "ದಿನಕ್ಕೆ ಒಂದರಿಂದ ಎರಡು ಮೃತದೇಹಗಳನ್ನು ದಫನ ಮಾಡಲಾಗುತ್ತಿತ್ತು. ಆದರೆ ಇದೀಗ ದಿನಕ್ಕೆ 17 ಮೃತದೇಹಗಳನ್ನು ದಫನ ಮಾಡಲಾಗುತ್ತಿದೆ. ಕಳೆದ ಐದು ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇನ್ನು ಕೇವಲ 90 ಮೃತದೇಹಗಳನ್ನ ಹೂಳಲು ಸಾಕಾಗುವಷ್ಟು ಜಾಗ ಮಾತ್ರ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಸ್ಮಶಾನ ಭರ್ತಿಯಾಗಲಿದೆ" ಎಂದು ಉಸ್ತುವಾರಿ ವಹಿಸಿರುವ ಮುಹಮ್ಮದ್ ಶಮೀಮ್ ಹೇಳುತ್ತಾರೆ.

ಜನ ತೀರಾ ವಿಳಂಬವಾಗಿ ಅಂದರೆ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಹೃದ್ರೋಗ ಶಸ್ತ್ರಚಿಕಿತ್ಸಕ ತಜ್ಞ ಡಾ.ರಿತ್ವಿಕ್‌ರಾಜ್ ಭೂಯಾನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News