ಕುಂಭಮೇಳದಲ್ಲಿ ವಿಶೇಷ ಪೊಲೀಸ್‌ ಅಧಿಕಾರಿಗಳಾಗಿ 1500 ಆರೆಸ್ಸೆಸ್‌ ಕಾರ್ಯಕರ್ತರ ನೇಮಕ

Update: 2021-04-15 07:00 GMT

ಹರಿದ್ವಾರ್: ದೇಶದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿರುವಂತೆಯೇ ಹರಿದ್ವಾರದಲ್ಲಿ ಕುಂಭ ಮೇಳದಲ್ಲಿ ಲಕ್ಷಾಂತರ ಮಂದಿಯ ಭಾಗವಹಿಸುವಿಕೆ ಕೋವಿಡ್ ಪ್ರಕರಣಗಳ ಇನ್ನಷ್ಟು ಏರಿಕೆಯ  ಭೀತಿ ಮೂಡಿಸಿದೆ. 

ಈ ನಡುವೆ ಉತ್ತರಾಖಂಡ ಪೊಲೀಸ್ ಇಲಾಖೆ ಹರಿದ್ವಾರದಲ್ಲಿ  ಸುಮಾರು 1,553 ಮಂದಿ ಆರೆಸ್ಸೆಸ್ ಸ್ವಯಂಸೇವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ (ಸ್ಪೆಷಲ್ ಪೊಲೀಸ್ ಆಫೀಸರ್ಸ್) ಮೊತ್ತ ಮೊದಲ ಬಾರಿಗೆ ನೇಮಕಗೊಳಿಸಿದೆ. ಇವರ ಪೈಕಿ 1500 ಮಂದಿ ವಿವಿಧೆಡೆ ನಿಯೋಜನೆಗೊಂಡಿದ್ದರೆ ಉಳಿದವರ ಸೇವೆಯನ್ನು ಅಗತ್ಯ ಬಿದ್ದಾಗ ಬಳಸಲು ನಿರ್ಧರಿಸಲಾಗಿದೆ. ಈ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ಗುರುತು ಕಾರ್ಡ್, ಕ್ಯಾಪ್ ಮತ್ತು ಜ್ಯಾಕೆಟ್ ಒದಗಿಸಲಾಗಿದೆ.

ಈ ಹಿಂದೆಯೂ ಕುಂಭ ಮೇಳದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಸೇವೆ ಸಲ್ಲಿಸಿದ್ದರೂ ಇದೇ ಮೊದಲ ಬಾರಿಗೆ ಅವರಿಗೆ ಗುರುತು ಕಾರ್ಡ್ ಮತ್ತು ವಿಶೇಷ ಪೊಲೀಸ್ ಅಧಿಕಾರಿಗಳ ಸ್ಥಾನ ನೀಡಲಾಗಿದೆ. ಅವರು ಸಂಚಾರ ಮತ್ತು ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ  ಎಂದು ಕುಂಭ ಮೇಳ ಡಿವೈಎಸ್ಪಿ ಬಿರೇಂದ್ರ ಪ್ರಸಾದ್ ದಬ್ರಾಲ್ ಹೇಳಿದ್ದಾರೆ.

ಕಾಂಗ್ರೆಸ್ ಸೇವಾ ದಳ ಸಹಿತ ವಿವಿಧ ಇತರ ಸಂಘಟನೆಗಳ ಕಾರ್ಯಕರ್ತರನ್ನೂ ಈ ಬಾರಿಯ ಕುಂಭ ಮೇಳಕ್ಕೆ ಎಸ್‍ಪಿಒ ಆಗಿ  ನೇಮಕಗೊಳ್ಳಲು ಕರೆಸಲಾಗಿದೆ ಎಂದು ಅವರು ಹೇಳಿದ್ದಾರೆ.

 ಕುಂಭ ಮೇಳ ಐಜಿ ಸಂಜಯ್ ಗುಂಜ್ಯಾಲ್ ಅವರ ಮುತುವರ್ಜಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು ಅವರು ಆರೆಸ್ಸೆಸ್ ಪದಾಧಿಕಾರಿಗಳನ್ನು ಸಂಪರ್ಕಿಸಿ ಕಾರ್ಯಕರ್ತರ ಸೇವೆ ಕೋರಿದ್ದರು ಎಂದು ಆರೆಸ್ಸೆಸ್ ಉತ್ತರಾಖಂಡ ಪ್ರಾಂತ್ ಶಾರೀರಿಕ್ ಪ್ರಮುಖ್ ಸುನಿಲ್ ಹೇಳಿದ್ದಾರೆ.

ಈ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ವೇತನ ದೊರೆಯುವುದಿಲ್ಲ ಹಾಗೂ ಅವರದ್ದು ಸಮಾಜ ಸೇವೆಯಾಗಿದೆ ಎಂದು ಅವರು ಹೇಳಿದ್ದಾರೆ. ವಿಶೇಷ ಪೊಲೀಸ್ ಅಧಿಕಾರಿಗಳು ಹರಿದ್ವಾರ, ಘಾಟ್, ರೈಲ್ವೆ ನಿಲ್ದಾಣ, ಕ್ರಾಸಿಂಗ್ ಮತ್ತಿತರ ಪ್ರಮುಖ ಸ್ಥಳಗಳಲ್ಲಿ  ಶಿಫ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಪ್ರತಿಯೊಂದು ಕಡೆ ಕನಿಷ್ಠ ಆರು ಕಾರ್ಯಕರ್ತರು ನಿಯೋಜನೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News