ಕೋವಿಡ್-19 ರೋಗಿಯ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿದ ಆಸ್ಪತ್ರೆಯ ಸಿಬ್ಬಂದಿ, ರೋಗಿ ಮೃತ

Update: 2021-04-15 08:29 GMT
ಸಾಂದರ್ಭಿಕ ಚಿತ್ರ 

ಶಿವಪುರಿ(ಮಧ್ಯಪ್ರದೇಶ): ಕೋವಿಡ್-19ನ ಎರಡನೇ ಅಲೆ ಹಿಂದಿಗಿಂತಲೂ ವೇಗವಾಗಿ ಹರಡುತ್ತಿದ್ದು ದೇಶಾದ್ಯಂತ ಆಘಾತಕಾರಿ ಸುದ್ದಿಗಳು ವರದಿಯಾಗುತ್ತಿವೆ.  ಇತರ ರಾಜ್ಯಗಳಂತೆ ಎರಡನೇ ಕೋವಿಡ್ ಅಲೆಯೊಂದಿಗೆ ಹೋರಾಡುತ್ತಿರುವ ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವಾರು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ.

ರಾಜ್ಯ ರಾಜಧಾನಿ ಭೋಪಾಲ್ ನಿಂದ ಸುಮಾರು 300 ಕಿ.ಮೀ.ದೂರದಲ್ಲಿರುವ ಶಿವಪುರಿಯ ಸರಕಾರಿ ಆಸ್ಪತ್ರೆಯಿಂದ ವಶಪಡಿಸಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಗಳು ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ. ಆಸ್ಪತ್ರೆಯ ಸಿಬ್ಬಂದಿಯೇ ಆಮ್ಲಜನಕದ ಪೂರೈಕೆಯನ್ನು ನಿಲ್ಲಿಸಿ ಕೋವಿಡ್-19 ರೋಗಿಯನ್ನು ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ರೋಗಿಯ ಮನೆಯವರು ಆಕ್ಸಿಜನ್  ಪೂರೈಕೆಯನ್ನು ಸ್ಥಗಿತಗೊಳಿಸಿದ್ದರಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ಆರಂಭದಲ್ಲಿ ನಿರಾಕರಿಸಿದ್ದ ಆಸ್ಪತ್ರೆಯ ಆಡಳಿತವು ತಮ್ಮಿಂದ ಯಾವುದೆ ಲೋಪ ಆಗಿಲ್ಲ ಎಂದಿತ್ತು. ಇದೀಗ ಸಿಸಿಟಿವಿ ದೃಶ್ಯಾವಳಿಯ ಆಸ್ಪತ್ರೆಯ ಸಿಬ್ಬಂದಿಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.

ನನ್ನ ತಂದೆ ಕಳೆದ 2-3 ದಿನಗಳಿಂದ ಚೆನ್ನಾಗಿದ್ದರು. ಅವರು ಆಹಾರವನ್ನು ಸೇವಿಸುತ್ತಿದ್ದರು. ಮಂಗಳವಾರ ರಾತ್ರಿ ಸಿಬ್ಬಂದಿ ಆಮ್ಲಜನಕ ಪೂರೈಕೆಯನ್ನು ತೆಗೆದು ಹಾಕಿದ್ದ. ನನಗೆ ಬೆಳಗ್ಗೆ ಕರೆ ಬಂತು. ನಾನು ಆಸ್ಪತ್ರೆಗೆ ಧಾವಿಸಿದ್ದೆ. ತಂದೆಗೆ ಮತ್ತೆ ಆಮ್ಲಜನಕವನ್ನು ಒದಗಿಸುವಂತೆ ಸಿಬ್ಬಂದಿಯನ್ನು ವಿನಂತಿಸಿದ್ದೆ. ಆದರೆ ಅವರು ನಿರಾಕರಿಸಿದರು. ನಂತರ ಅವರನ್ನು ಐಸಿಯು(ತೀವ್ರ ನಿಗಾ ಘಟಕ)ಗೆ ಕರೆದೊಯ್ದರು. ಆದರೆ ಅಲ್ಲಿ ಅವರು 15 ನಿಮಿಷಗಳಲ್ಲಿ ನಿಧನರಾದರು ಎಂದು ಮೃತ ವ್ಯಕ್ತಿಯ ಪುತ್ರ ಹೇಳಿದ್ದಾನೆ.

ಸಿಸಿಟಿವಿ ಕ್ಲಿಪ್ ಒಂದು ನಿಮಿಷದಷ್ಟು ಉದ್ದವಾಗಿದ್ದು,ಇದರಲ್ಲಿ ವಯಸ್ಸಾದ ವ್ಯಕ್ತಿಯ ಮುಖ ಅಸ್ಪಷ್ಟವಾಗಿ ಕಾಣುತ್ತಿದ್ದು, ಯುವ ಆರೋಗ್ಯ ಕಾರ್ಯಕರ್ತನೊಬ್ಬ ಹಾಸಿಗೆಯ ಬಳಿ ನಿಂತು ಸಹಾಯಕ್ಕಾಗಿ ತನ್ನ ಸಹೋದ್ಯೋಗಿಯನ್ನು ಕರೆಯುತ್ತಾನೆ. ವೀಡಿಯೊ ಕ್ಲಿಪ್ ನ ಕೊನೆಯಲ್ಲಿ ಒಂದು ಬಟನ್ ಒತ್ತುವುದು ಕಂಡುಬಂದಿದೆ. ಯಾವುದೇ ಆರೋಗ್ಯ ಕಾರ್ಯಕರ್ತ ಪಿಪಿಇ ಕಿಟ್ ಧರಿಸಿರಲಿಲ್ಲ. ಕೋವಿಡ್ ಆಸ್ಪತ್ರೆಯಲ್ಲಿ ಪಿಪಿಇ ಧರಿಸುವುದು ಕಡ್ಡಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News