ಇಲ್ಲಿ ಹಸಿವಿನಿಂದ ಸಾಯುವವರಿಲ್ಲ, ನಮ್ಮ ದೇಶದ ಕುರಿತು ಅಮಿತ್‌ ಶಾಗಿರುವ ಜ್ಞಾನ ʼಸೀಮಿತʼ: ಬಾಂಗ್ಲಾದೇಶ ವಿದೇಶಾಂಗ ಸಚಿವ

Update: 2021-04-15 10:39 GMT

ಢಾಕಾ: ಭಾರತದ ಗೃಹ ಸಚಿವ ಅಮಿತ್ ಶಾ ಅವರಿಗೆ ತಮ್ಮ ನೆರೆಯ ದೇಶವಾದ ಬಾಂಗ್ಲಾದೇಶದ ಕುರಿತಾಗಿ ಇರುವ ಜ್ಞಾನ 'ಬಹಳ ಸೀಮಿತ' ಎಂದು ಅಲ್ಲಿನ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಬುಧವಾರ ಹೇಳಿದ್ದಾರೆ.

ತಮ್ಮ ತವರು ದೇಶದಲ್ಲಿ ಆಹಾರ ದೊರಕದೆ ಬಾಂಗ್ಲಾದೇಶದ ಬಡ ಜನರು ಭಾರತಕ್ಕೆ ನುಸುಳಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮಿತ್ ಶಾ ಹೇಳಿರುವ ಕುರಿತು ಮೋಮೆನ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

"ನೋಡಿದರೂ ಕಾಣಿಸಿಲ್ಲ ಎಂಬಂತಿರುವ ಹಾಗೂ ತಿಳಿದಿದ್ದರೂ ಅರ್ಥವಾಗದೇ ಇರುವ ಹಲವು ಬುದ್ಧಿವಂತರು ಈ ಜಗತ್ತಿನಲ್ಲಿ ಇದ್ದಾರೆ. ಆದರೆ ಅವರು (ಶಾ) ಏನೋ  ಆ ರೀತಿ ಹೇಳಿದ್ದಾರೆ. ಬಾಂಗ್ಲಾದೇಶದ ಕುರಿತು ಅವರ ಜ್ಞಾನ ಸೀಮಿತ ಎಂದು ನಾನು ಹೇಳುತ್ತೇನೆ, ನಮ್ಮ ದೇಶದಲ್ಲಿ ಈಗ ಯಾರೂ ಹಸಿವಿನಿಂದ ಸಾಯುವುದಿಲ್ಲ. ಇಲ್ಲಿ 'ಮೊಂಗ'' ಕೂಡ ಇಲ್ಲ," ಎಂದು ಅವರು ತೀಕ್ಷ್ಣವಾಗಿ  ಹೇಳಿದ್ದಾರೆ. ಬಾಂಗ್ಲಾದೇಶದ ಉತ್ತರದ ಜಿಲ್ಲೆಗಳಲ್ಲಿ ಕೆಲವೊಂದು ಸಮಯದಲ್ಲಿ ಜನರನ್ನು ಕಾಡುವ ಬಡತನ ಮತ್ತು ಹಸಿವಿಗೆ 'ಮೊಂಗ' ಎನ್ನಲಾಗುತ್ತದೆ.

"ಉದ್ಯೋಗ,  ಶೌಚಾಲಯಗಳ ಲಭ್ಯತೆ ಸಹಿತ ಹಲವಾರು ಸಾಮಾಜಿಕ ಸೂಚ್ಯಂಕಗಳಲ್ಲಿ ಬಾಂಗ್ಲಾದೇಶ ಭಾರತಕ್ಕಿಂತ ಮುಂದಿದೆ, ಭಾರತದ ಒಂದು ಲಕ್ಷಕ್ಕೂ ಅಧಿಕ ಮಂದಿ ಬಾಂಗ್ಲಾದೇಶದಲ್ಲಿ ದುಡಿಯುತ್ತಿದ್ದಾರೆ. ನಮಗೆ ಭಾರತಕ್ಕೆ ಹೋಗುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.

ಕೆಲ ದಿನಗಳ ಹಿಂದೆ ಬಂಗಾಳಿ ಭಾಷೆಯ ಆನಂದಬಜಾರ್ ಪತ್ರಿಕಾಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮಿತ್ ಶಾ "ಯಾವುದೇ ಹಿಂದುಳಿದ ದೇಶದಲ್ಲಿ ಅಭಿವೃದ್ಧಿ ಆರಂಭಗೊಂಡಾಗ ಮೊದಲು ಶ್ರೀಮಂತರು ಪ್ರಯೋಜನಗಳನ್ನು ಪಡೆಯುತ್ತಾರೆ, ಬಡವರಲ್ಲ, ಬಾಂಗ್ಲಾದೇಶದಲ್ಲಿ ಈಗಲೂ ಈ ಪ್ರಕ್ರಿಯೆ ಆಗುತ್ತಿದೆ. ಆದುದರಿಂದ ಬಡವರಿಗೆ ಆಹಾರ ಕೂಡ ಸಿಗುತ್ತಿಲ್ಲ ಹಾಗೂ ಅವರು ಭಾರತದೊಳಗೆ ನುಸುಳುತ್ತಿದ್ದಾರೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News