ಕೋವಿಡ್-19 ರೋಗವನ್ನು ನೈಸರ್ಗಿಕ ವಿಪತ್ತು ಎಂದು ಪರಿಗಣಿಸಿ: ಕೇಂದ್ರಕ್ಕೆ ಉದ್ಧವ್ ಠಾಕ್ರೆ ಒತ್ತಾಯ

Update: 2021-04-15 16:47 GMT

ಮುಂಬೈ,ಎ.15: ಸಂತ್ರಸ್ತರಿಗೆ ಸೌಲಭ್ಯಗಳನ್ನು ಒದಗಿಸಲು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (ಎಸ್ಡಿಆರ್ಎಫ್)ಯನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಕೋವಿಡ್-19 ಸಾಂಕ್ರಾಮಿಕವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.


ಮಂಗಳವಾರ ರಾಜ್ಯದಲ್ಲಿ ನೂತನ ಕೋವಿಡ್ ನಿರ್ಬಂಧಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ ಠಾಕ್ರೆ,ಭೂಕಂಪ,ಭಾರೀ ಮಳೆ ಮತ್ತು ನೆರೆಗಳನ್ನು ನೈಸರ್ಗಿಕ ವಿಪತ್ತುಗಳೆಂದು ವ್ಯಾಖ್ಯಾನಿಸಲಾಗಿದೆ ಮತ್ತು ಸಂತ್ರಸ್ತರಿಗೆ ವ್ಯಕ್ತಿಗತ ಲಾಭಗಳನ್ನು ನೀಡಲಾಗುತ್ತದೆ. ಕೋವಿಡ್ ಸಾಂಕ್ರಾಮಿಕವು ನೈಸರ್ಗಿಕ ವಿಪತ್ತು ಎಂದು ನಾವು ಒಪ್ಪಿಕೊಂಡಿದ್ದೇವೆ. ಹೀಗಾಗಿ ಕೋವಿಡ್ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ಸಂತ್ರಸ್ತರಿಗೂ ವ್ಯಕ್ತಿಗತ ಲಾಭಗಳನ್ನು ನೀಡುವಂತೆ ನಾವು ಪ್ರಧಾನಿಯವರನ್ನು ಕೋರಲಿದ್ದೇವೆ ಎಂದು ತಿಳಿಸಿದ್ದರು.


ಠಾಕ್ರೆ ಮೋದಿಯವರಿಗೆ ಪತ್ರ ಬರೆದಿರುವುದನ್ನು ದೃಢಪಡಿಸಿದ ಮುಖ್ಯ ಕಾರ್ಯದರ್ಶಿ ಸೀತಾರಾಮ ಕುಂಟೆ ಅವರು,ಕೋವಿಡ್-19 ಸಾಂಕ್ರಾಮಿಕವು ವಿಪತ್ತಾಗಿದ್ದರೂ ಅದನ್ನು ನೈಸರ್ಗಿಕ ವಿಪತ್ತು ಎಂದು ಇನ್ನಷ್ಟೇ ವ್ಯಾಖ್ಯಾನಿಸಬೇಕಿದೆ. ಹೀಗಾಗಿ ಹಾಲಿ ವ್ಯವಸ್ಥೆಯಡಿ ವ್ಯಕ್ತಿಗತ ಲಾಭಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.


ಕೋವಿಡ್-19 ಕೇಂದ್ರಗಳಂತಹ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಮತ್ತು ಆಮ್ಲಜನಕ ಹಾಗೂ ಔಷಧಿಗಳ ಖರೀದಿಗಾಗಿಯೂ ಹಾಲಿಎಸ್ಡಿಆರ್ಎಫ್ನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ವ್ಯಕ್ತಿಗತ ಲಾಭಗಳನ್ನು ನೀಡಲು ಅದನ್ನು ಬಳಸುವಂತಿಲ್ಲ. ಕೇಂದ್ರವು ಸಾಂಕ್ರಾಮಿಕವನ್ನು ನೈಸರ್ಗಿಕ ವಿಪತ್ತು ಎಂದು ಪರಿಗಣಿಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ ಎಂದ ಅಧಿಕಾರಿಯೋರ್ವರು,ರಾಜ್ಯದಲ್ಲಿ ನಿರ್ಬಂಧಗಳ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದ್ದೆಯಡಿ ಸಂತ್ರಸ್ತರಿಗೆ ದಿನಕ್ಕೆ ನೂರು ರೂ.ನೀಡಬಹುದಾಗಿದೆ ಮತ್ತು ಇದು ಮಂಗಳವಾರ ರಾಜ್ಯ ಸರಕಾರವು ಪ್ರಕಟಿಸಿರುವ ಪರಿಹಾರ ಪ್ಯಾಕೇಜ್ಗೆ ಅತಿರಿಕ್ತವಾಗಿರುತ್ತದೆ ಎಂದು ತಿಳಿಸಿದರು.


ಮಹಾರಾಷ್ಟ್ರವು ಈಗಾಗಲೇ ಏಳು ಕೋಟಿ ಫಲಾನುಭವಿಗಳಿಗೆ ಆಹಾರ ಭದ್ರತೆ ಯೋಜನೆಯಡಿ ಒಂದು ತಿಂಗಳ ಅವಧಿಗೆ ಮೂರು ಕೆಜಿ ಗೋದಿ ಮತ್ತು ಎರಡು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ,ಶಿವಭೋಜನ ಥಾಲಿಯನ್ನು ಉಚಿತವಾಗಿ ಒದಗಿಸುವುದಾಗಿ ಪ್ರಕಟಿಸಿದೆ. ಅಲ್ಲದೆ ಐದು ಕಲ್ಯಾಣ ಯೋಜನೆಗಳಡಿ ಸುಮಾರು 35 ಲ.ಫಲಾನುಭವಿಗಳು ಮುಂದಿನ ಎರಡು ತಿಂಗಳುಗಳ ಕಾಲ ತಲಾ ಮಾಸಿಕ 1,000 ರೂ.ಗಳನ್ನು ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News