​ಕೇರಳ ದೇವಸ್ಥಾನ ಜಾತ್ರೆಯಲ್ಲಿ 15 ವರ್ಷದ ಬಾಲಕ ಅಭಿಮನ್ಯು ಹತ್ಯೆ: ಬಿಜೆಪಿಗರ ಕೃತ್ಯ ಎಂದು ಆರೋಪಿಸಿದ ಸಿಪಿಎಂ

Update: 2021-04-15 13:28 GMT
Photo: Ndtv.com

ತಿರುವನಂತಪುರಂ: ಮಂಗಳವಾರ ರಾತ್ರಿ ಅಲಪ್ಪುಝ ಜಿಲ್ಲೆಯ ಪಡಯನಿವೆಟ್ಟೊಂ ದೇವಸ್ಥಾನದ ಜಾತ್ರೆ ವೇಳೆ ಕೆಲ ವ್ಯಕ್ತಿಗಳಿಂದ  ಇರಿತಕ್ಕೊಳಗಾಗಿ 15 ವರ್ಷದ ಬಾಲಕನೊಬ್ಬ ಮೃತಪಟ್ಟ  ಘಟನೆಯ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆದರೆ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.

ಬಾಲಕ ಅಭಿಮನ್ಯು ಜತೆಗೆ ಕೆಲ ವ್ಯಕ್ತಿಗಳು  ಜಗಳವಾಡಿ ನಂತರ ಆತನಿಗೆ ಇರಿದಿದ್ದರು. ಕೊಲೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ಘಟನೆ ಸಂಬಂಧ ಕೆಲ ವ್ಯಕ್ತಿಗಳನ್ನು ವಿಚಾರಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೆ ಇದೊಂದು ʼರಾಜಕೀಯ ಕೊಲೆ' ಎಂದು ಸಿಪಿಎಂ ಆರೋಪಿಸಿದ್ದು  ಬಿಜೆಪಿ ಮತ್ತು ಆರೆಸ್ಸೆಸ್ ಇದಕ್ಕೆ ಕಾರಣ ಎಂದು ದೂರಿದೆ.

ಅಭಿಮನ್ಯುವಿನ ಹಿರಿಯ ಸೋದರ ಸಿಪಿಎಂ ಕಾರ್ಯಕರ್ತನಾಗಿದ್ದುದರಿಂದ ಹಾಗೂ ಆತ ಎಲ್ಲಿದ್ದಾನೆಂದು ತಿಳಿಯದೇ ಇರುವುದರಿಂದ ಅಭಿಮನ್ಯುವಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಡಿವೈಎಫೈ ರಾಜ್ಯಾಧ್ಯಕ್ಷ ಎ. ರಹೀಂ ಆರೋಪಿಸಿದ್ದಾರೆ.  ಘಟನೆಯಲ್ಲಿ ಇಬ್ಬರು ಎಸ್‍ಎಫ್‍ಐ ಕಾರ್ಯಕರ್ತರೂ ಗಾಯಗೊಂಡಿದ್ದಾರೆಂದು ಅವರು ಹೇಳಿದರು.

ಆದರೆ ಈ ಹತ್ಯೆ ಹಿಂದೆ ಪಕ್ಷದ ಕಾರ್ಯಕರ್ತರ ಅಥವಾ ಆರೆಸ್ಸೆಸ್ ಕಾರ್ಯಕರ್ತರ ಪಾತ್ರವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News