ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನಾ ಪಡೆಗಳ ವಾಪಸಾತಿ ಪ್ರಕ್ರಿಯೆ ಮೇ 1ರಿಂದ ಆರಂಭ: ಬೈಡನ್ ಘೋಷಣೆ

Update: 2021-04-15 14:04 GMT

ವಾಷಿಂಗ್ಟನ್: "ಅಮೆರಿಕಾದ ಅತ್ಯಂತ ದೀರ್ಘಾವಧಿ ಯುದ್ಧವನ್ನು ಅಂತ್ಯಗೊಳಿಸುವ ಸಮಯ ಬಂದಿದೆ" ಎಂದು ಹೇಳಿದ ಅಧ್ಯಕ್ಷ ಜೋ ಬೈಡೆನ್, ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನಾ ಪಡೆಗಳನ್ನು ವಾಪಸ್ ಕರೆಸುವ ನಿರ್ಧಾರ ಪ್ರಕಟಿಸಿದ್ದಾರೆ.

"ಇದು ಪ್ರಾಯಶಃ ನಾನು ಸ್ವತಃ ಕೈಗೊಳ್ಳಬಹುದಾದ ಕ್ರಮವಲ್ಲ, ಇದು ಅಮೆರಿಕಾ ಸರಕಾರ ಮಾಡಿದ್ದ ಒಪ್ಪಂದ, ಈ ಒಪ್ಪಂದದ ಅನುಸಾರ ಹಾಗೂ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿ ಅಮೆರಿಕಾ ತನ್ನ ಅಂತಿಮ ಸೇನಾಪಡೆ ವಾಪಸಾತಿಯನ್ನು ಈ ವರ್ಷದ ಮೇ 1ರಂದು ಆರಂಭಿಸಲಿದೆ," ಎಂದು ದೇಶವನ್ನುದ್ದೇಶಿಸಿ  ಮಾಡಿದ ಭಾಷಣದಲ್ಲಿ ಬೈಡೆನ್ ಹೇಳಿದ್ದಾರೆ.

ಸೇನಾಪಡೆಗಳ ವಾಪಸಾತಿ ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ಮಿತ್ರ ದೇಶಗಳ ಜತೆ ಸಹಭಾಗಿತ್ವದಿಂದ ಮಾಡಲಾಗುವುದು ಎಂದು ಅವರು ಹೇಳಿದರು.

ಬೈಡೆನ್ ಅವರ ಘೋಷಣೆಯ ಬೆನ್ನಿಗೇ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‍ಬರ್ಗ್ ಅವರು ಹೇಳಿಕೆ ನೀಡಿ ಅಮೆರಿಕಾದ ಎಲ್ಲಾ ಸೇನಾ ಪಡೆಗಳ ವಾಪಸಾತಿ ಕುರಿತು ಅಮೆರಿಕಾ ಅಧ್ಯಕ್ಷರ ತೀರ್ಮಾನಕ್ಕೆ ಹೊಂದಿಕೊಂಡು ಅಫ್ಘಾನಿಸ್ತಾನದಿಂದ  ಮೈತ್ರಿಕೂಟವು  ಸುಮಾರು 7,000 ಪಡೆಗಳನ್ನು ವಾಪಸ್ ಪಡೆಯಲು ಒಪ್ಪಿದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 11, 2001ರ ದಾಳಿಯ ವಾರ್ಷಿಕೋತ್ಸವಕ್ಕಿಂತ ಮುನ್ನ ಸೇನಾ ಪಡೆಗಳ ವಾಪಸಾತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬೈಡನ್ ಹೇಳಿದರು.

ಇಪ್ಪತ್ತು ವರ್ಷಗಳ ಹಿಂದೆ ನಡೆದ ಘಟನೆಯಿಂದಾಗಿ ಅಮೆರಿಕಾ ಯುದ್ಧ ಮಾಡುವಂತಾಯಿತು ಆದರೆ ಅಲ್ಲಿ ಈಗಲೂ ಏಕೆ ಉಳಿಯಬೇಕೆಂಬುದಕ್ಕೆ  ಕಾರಣ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸುಮಾರು 3,000 ಜನರನ್ನು ಬಲಿ ಪಡೆದ ಸೆಪ್ಟೆಂಬರ್ 11, 2001 ದಾಳಿಯ ಕುರಿತಂತೆ ಅದನ್ನು ಉಲ್ಲೇಖಿಸದೆಯೇ ಅವರು ಮೇಲಿನ ಮಾತುಗಳನ್ನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News