"ಸಾಂಕ್ರಾಮಿಕ ಹೆಚ್ಚುತ್ತಿದ್ದರೂ ಹಿಂದು ಉತ್ಸವಗಳಲ್ಲಿ ಬೃಹತ್ ಜನಸ್ತೋಮಗಳು"

Update: 2021-04-15 16:08 GMT

 ಹೊಸದಿಲ್ಲಿ,ಎ.15: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ನಡುವೆಯೇ ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದ್ದರೂ ಭಾರೀ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ನೀಡಲಾಗುತ್ತಿದೆ ಎಂದು ವರದಿ ಮಾಡಿವೆ. ಗುರುವಾರ ಭಾರತದಲ್ಲಿ ಎರಡು ಲಕ್ಷಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು,2020 ಜನವರಿಯಲ್ಲಿ ಕೊರೋನವೈರಸ್ ಸಾಂಕ್ರಾಮಿಕವು ಸ್ಫೋಟಿಸಿದ ಬಳಿಕ ಇದು ಜಾಗತಿಕ ದೈನಂದಿನ ದಾಖಲೆಯಾಗಿದೆ. ಹೀಗಿದ್ದರೂ ಕುಂಭಮೇಳಕ್ಕೆ ಯಾವುದೇ ಅಡ್ಡಿಯಾಗಿಲ್ಲ.

 
ಗಂಗಾನದಿಯಲ್ಲಿ ಸ್ನಾನ ಮಾಡಲು ಭಾರೀ ಜನಜಂಗುಳಿ ಸೇರಿದ್ದನ್ನು ಚಿತ್ರಗಳು ತೋರಿಸಿವೆ ಮತ್ತು ಸುರಕ್ಷಿತ ಅಂತರ ನಿಯಮವನ್ನು ಜಾರಿಗೊಳಿಸಲು ಪೊಲೀಸರಿಗೆ ಅಧಿಕಾರವಿಲ್ಲದಂತಾಗಿದೆ ಎಂದು ಟೈಮ್ ಮ್ಯಾಗಝಿನ್ ಹೇಳಿದರೆ,ಹರಿದ್ವಾರದಲ್ಲಿ ಕುಂಭಮೇಳದೊಂದಿಗೆ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲಿ ರಾಜಕೀಯ ರ್ಯಾಲಿಗಳಿಂದಾಗಿ ಕೊರೋನವೈರಸ್ ಬಿಕ್ಕಟ್ಟು ಇನ್ನಷ್ಟು ಹದಗೆಟ್ಟಿದೆ ಎಂದು ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್,ವಾಹನದಲ್ಲಿ ಚಾಲಕ ಮಾತ್ರವಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಆದೇಶಿಸಿದ್ದರೂ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಾಸ್ಕ್ ಧರಿಸದೆ ಜನಸ್ತೋಮದತ್ತ ಕೈಬೀಸುತ್ತಿದ್ದನ್ನು ಬೆಟ್ಟು ಮಾಡಿದೆ.

ಭಕ್ತರ ಶ್ರದ್ಧೆಯು ಕೋವಿಡ್-19 ಭೀತಿಯನ್ನು ಇಲ್ಲವಾಗಿಸುತ್ತದೆ ಎಂಬ ಉತ್ತರಾಖಂಡ ಮುಖ್ಯಮಂತ್ರಿ ತೀರ್ಥಸಿಂಗ್ ರಾವತ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿರುವ ಅದು,ಈ ಹೇಳಿಕೆಯ ಕೆಲವೇ ದಿನಗಳಲ್ಲಿ ಅವರೂ ಸೋಂಕಿಗೆ ತುತ್ತಾಗಿದ್ದರು ಎಂದು ಉಲ್ಲೇಖಿಸಿದೆ.
ಗಂಗಾನದಿಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸ್ನಾನ ಮಾಡುತ್ತಿರುವ ಚಿತ್ರವನ್ನೂ ಅದು ಪ್ರಕಟಿಸಿದೆ.
 
‘ಸಾಂಕ್ರಾಮಿಕ ಹೆಚ್ಚುತ್ತಿದ್ದರೂ ಹಿಂದು ಉತ್ಸವಗಳಲ್ಲಿ ಬೃಹತ್ ಜನಸ್ತೋಮಗಳು ’ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಮಾಡಿರುವ ಅಸೋಸಿಯೇಟೆಡ್ ಪ್ರೆಸ್,ಪಕ್ಷದ ಬೃಹತ್ ಬೆಂಬಲಿಗರಾಗಿರುವ ಹಿಂದುಗಳ ಕೋಪಕ್ಕೆ ಗುರಿಯಾಗಲು ಸರಕಾರವು ಸಿದ್ಧವಿಲ್ಲ,ಹೀಗಾಗಿ ಸೋಂಕು ತೀವ್ರವಾಗಿ ಪ್ರಸಾರಗೊಳ್ಳುತ್ತಿದ್ದರೂ ಕುಂಭಮೇಳಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿಂದು ರಾಷ್ಟ್ರವಾದಿ ಬಿಜೆಪಿಯ ಟೀಕಾಕಾರರು ಹೇಳುತ್ತಿದ್ದಾರೆ ಎಂದಿದೆ. ಕುಂಭಮೇಳ ಮತ್ತು ತಬ್ಲೀಘಿ ಜಮಾಅತ್ ಸಮಾವೇಶಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರಕಾರದ ತಾರತಮ್ಯ ನೀತಿಯನ್ನು ಅದು ಪ್ರಮುಖವಾಗಿ ಬಿಂಬಿಸಿದೆ.

ಕುಂಭಮೇಳದಲ್ಲಿ ಭಾಗಿಯಾಗಿರುವ ಯಾತ್ರಿಕರು ಸುರಕ್ಷಿತ ಅಂತರ ನಿಯಮವನ್ನು ಉಲ್ಲಂಘಿಸುತ್ತಿರುವ ವೀಡಿಯೊವನ್ನು ಎಬಿಸಿ ನ್ಯೂಸ್ ಟ್ವೀಟಿಸಿದೆ.
 
ಕೋವಿಡ್-19 ಸೋಂಕು ಭಾರತವನ್ನು ಆವರಿಸಿಕೊಂಡಿದ್ದರೂ ಜನರು ಮುಖಕ್ಕೆ ಮಾಸ್ಕ್ ಧರಿಸದೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದಿರುವ ವಾಷಿಂಗ್ಟನ್ ಪೋಸ್ಟ್ನ ಸಂಪಾದಕೀಯವು,ಆಮ್ಲಜನಕ ಮತ್ತು ವೆಂಟಿಲೇಟರ್ ಕೊರತೆಯ ಬಗ್ಗೆ ವೈದ್ಯರ ಎಚ್ಚರಿಕೆಗಳ ನಡುವೆಯೇ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆ ಲಭ್ಯವಾಗದೆ ಹೊರಗೆ ಬೀದಿಗಳಲ್ಲಿ ಬಿದ್ದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದು ಭಾರತದಲ್ಲಿಯ ಇಂದಿನ ಸ್ಥಿತಿಯಾಗಿದೆ ಎಂದು ಬರೆದಿದೆ.

ಬಹುಶಃ ದೇಶದ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಕುಂಭಮೇಳದ ರದ್ದತಿಗೆ ಕರೆ ನೀಡದಿರುವುದರ ಬಗ್ಗೆ ಅಲ್ ಜಝೀರಾ ಅಚ್ಚರಿಯನ್ನು ವ್ಯಕ್ತಪಡಿಸಿದೆ.
                                                                                     
ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿದ್ದರೂ ಶ್ರದ್ಧೆಯು ನಮಗೆ ಎಲ್ಲಕ್ಕಿಂತ ಮಿಗಿಲಾಗಿದೆ. ಈ ಬಲವಾದ ನಂಬಿಕೆಯಿಂದಾಗಿಯೇ ಇಷ್ಟೊಂದು ಜನರು ಗಂಗಾನದಿಯಲ್ಲಿ ಸ್ನಾನ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂದು ಕುಂಭಮೇಳ ಸಂಘಟನಾ ಸಮಿತಿಯ ಸದಸ್ಯ ಸಿದ್ಧಾರ್ಥ ಚಕ್ರಪಾಣಿ ಹೇಳಿದ್ದನ್ನು ಎಎಫ್ಪಿ ಉಲ್ಲೇಖಿಸಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಒಂಭತ್ತು ಸಂತರು ಸೇರಿದಂತೆ ನೂರಾರು ಜನರು ಕೋವಿಡ್ ಸೋಂಕಿಗೆ ಗುರಿಯಾಗಿದ್ದಾರೆ ಎಂದು ವರದಿ ಮಾಡಿರುವ ಬಿಬಿಸಿ,ಭಾರತದಲ್ಲಿ ದಾಖಲೆ ಸಂಖ್ಯೆಯಲ್ಲಿ ದೈನಂದಿನ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದರೂ ಕುಂಭಮೇಳದಲ್ಲಿ ಜನರು ಜಮಾವಣೆಗೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಸರಕಾರದ ವಿರುದ್ಧ ಟೀಕೆಗಳು ಹೆಚ್ಚತೊಡಗಿವೆ ಎಂದಿದೆ. ಆರೋಗ್ಯ ತಜ್ಞರು ವ್ಯಕ್ತಪಡಿಸಿರುವ ಕಳವಳಗಳನ್ನೂ ಅದು ಬೆಟ್ಟು ಮಾಡಿದೆ.

ಪ್ರತಿದಿನ ಲಕ್ಷಾಂತರ ಜನರು ಕುಂಭಮೇಳಕ್ಕೆ ಆಗಮಿಸುತ್ತಿದ್ದರೂ ಕೆಲವೇ ಜನರನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಮತ್ತು ಕೋವಿಡ್ ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಳೆದ ಐದು ದಿನಗಳಲ್ಲಿ ಹರಿದ್ವಾರದಲ್ಲಿ ಹೊಸ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಎರಡು ಸಾವಿರವನ್ನು ದಾಟಿದೆ. ಕುಂಭಮೇಳವು ಎ.30ರವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News