ಉಡುಪಿ: ​ಎ.16 ರಿಂದ 1-19 ವರ್ಷದವರಿಗೆ ಉಚಿತ ಜಂತುಹುಳು ನಿವಾರಕ ಮಾತ್ರೆ ವಿತರಣೆ

Update: 2021-04-15 16:13 GMT

ಉಡುಪಿ, ಎ.15: ಜಿಲ್ಲೆಯಾದ್ಯಂತ 1ರಿಂದ 19 ವರ್ಷದೊಳಗಿನ ಪ್ರತಿಯೊಬ್ಬರಿಗೂ ಜಂತುಹುಳು ನಿವಾರಕ ಅಲ್ಬೆಂಡೋಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎ.16 ರಿಂದ 30ರವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣ ಯೋಜನೆಯಡಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ತಮ್ಮ ಸಮ್ಮುಖದಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡುವುದಲ್ಲದೇ ಅರ ಸೇವನೆ ಮಾಡಿಸಲಿದ್ದಾರೆ.

1ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2ರಿಂದ 9 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆ ನೀಡಲಾಗುವುದು. ಮಕ್ಕಳು ಚಿಕ್ಕವರಿದ್ದಲ್ಲಿ ಮಾತ್ರೆಯನ್ನು ಚಮಚದಲ್ಲಿ ಪುಡಿ ಮಾಡಿ ನೀರಿನಲ್ಲಿ ಅಥವಾ ಚೀಪಿ ಸೇವಿಸಬೇಕು. ಮನೆಯವರು ಮಕ್ಕಳಿಗೆ ಮಾತ್ರೆ ನೀಡಲು ಅನುಕೂಲವಾಗುವಂತೆ ಶುದ್ಧವಾದ ಕುಡಿಯುವ ನೀರು ಮತ್ತು ಚಮಚವನ್ನು ಮಾತ್ರೆ ವಿತರಣೆ ಸಂದರ್ಭದಲ್ಲಿ ಇಟ್ಟುಕೊಂಡು ಸಹಕರಿಸಬೇಕು ಎಂದವರು ತಿಳಿಸಿದ್ದಾರೆ.

ಸಣ್ಣ ಪುಟ್ಟ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆಯಂತಹ ಸಮಸ್ಯೆ ಇದ್ದ ಮಕ್ಕಳಿಗೆ ಮಾತ್ರೆಯನ್ನು ನೀಡಬಾರದು. ಅಲ್ಲದೇ ಮಕ್ಕಳು ಬೇರೆ ಯಾವುದೇ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ನಂತರ ಅಲ್ಬೆಂಡೋಜೋಲ್ ಮಾತ್ರೆಯನ್ನು ಸೇವಿಸಬೇಕು ಎಂದವರು ಹೇಳಿದ್ದಾರೆ.

ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ 2,71,000 ಮಕ್ಕಳಿಗೆ ಜಂತುಹುಳ ಮಾತ್ರೆ ವಿತರಿಸಲು ಗುರುತಿಸಲಾಗಿದ್ದು, ಮಾತ್ರೆ ವಿತರಿಸುವ ಸಂದರ್ಭದಲ್ಲಿ ಸಿಬ್ಬಂದಿಗಳು ಸರಕಾರದ ಕೋವಿಡ್ ಮಾರ್ಗಸೂಚಿಗಳಾದ ಸುರಕ್ಷತಾ ಅಂತರ, ಮುಖಗವಸು ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿದೆ.

ಜಂತುಹುಳುಗಳ ಬಾಧೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ಥರಾಗಿ ಶಾಲೆಗಳಿಗೆ ಗೈರು ಹಾಜರಾಗುತ್ತಿರುವುದು ಅಥವಾ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ನೀಡಲು ವಿಫಲರಾಗುವುದರ ಜೊತೆಗೆ ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುವ ಸಾದ್ಯತೆ ಇರುತ್ತದೆ. ಜಂತುಹುಳು ಬಾಧೆಯು ನೈರ್ಮಲ್ಯತೆಯ ಕೊರತೆ ಹಾಗೂ ವೈಯಕ್ತಿಕ ಶುಚಿತ್ವದ ಕೊರತೆಯಿಂದ, ಜಂತುಹುಳು ಸೋಂಕಿನ ಮಣ್ಣನ್ನು ಸ್ಪಶಿರ್ಸುವುದರಿಂದ ಕಾಣಿಸಿಕೊಳ್ಳುತ್ತದೆ.

ಜಂತುಹುಳು ಬಾಧೆಯ ಲಕ್ಷಣಗಳು: ಯಾವ ಮಕ್ಕಳಲ್ಲಿ ಸಂಖ್ಯೆ ಹೆಚ್ಚಿದೆಯೋ, ಆ ಮಕ್ಕಳಲ್ಲಿ ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಇಂತಹ ಲಕ್ಷಣಗಳು ಕಂಡುಬರುತ್ತವೆ. ಜಂತುಹುಳು ಸಂಖ್ಯೆ ಕಡಿಮೆ ಇದ್ದವರಲ್ಲಿ ಯಾವುದೇ ತೊಂದರೆಗಳು ಕಾಣಿಸದಿರಲೂಬಹುದು.
ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಶುಚಿಯಾಗಿಡುವುದು, ಊಟ/ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ತಪ್ಪದೇ ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಆಹಾರ ಪದಾರ್ಥಗಳನ್ನು ಮುಚ್ಚಿಡುವುದು, ಶುದ್ಧೀಕರಿಸಿದ ನೀರನ್ನೇ ಕುಡಿಯುವುದು, ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುದ್ಧ ನೀರಿನಿಂದ ತೊಳೆಯುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ಮಲ ವಿಸರ್ಜನೆಗೆ ಶೌಚಾಲಯವನ್ನೇ ಬಳಸುವುದು, ನಡೆಯುವಾಗ ಪಾದರಕ್ಷೆಗಳನ್ನು ಬಳಸುವುದರಿಂದ ಜಂತುಹುಳು ಬಾಧೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.

ಜಂತುಹುಳು ಬಾಧೆ ನಿವಾರಣೆಯಿಂದ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟುವುದು, ಪೌಷ್ಟಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಏಕಾಗ್ರತೆ, ಕಲಿಕೆಯ ಶಕ್ತಿ ಸುಧಾರಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News