ಸೌದಿ ಅರೆಬಿಯಾದಲ್ಲಿ ದಫನ ಮಾಡಲಾದ ಹಿಂದು ವ್ಯಕ್ತಿಯ ಅವಶೇಷ ಮರಳಿ ತರಲು ಕ್ರಮ

Update: 2021-04-15 17:49 GMT

ಹೊಸದಿಲ್ಲಿ, ಎ.15: ಸೌದಿ ಅರೆಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ಜಿದ್ದಾದಲ್ಲಿ ಮುಸ್ಲಿಂ ಸಂಪ್ರದಾಯದಂತೆ ದಫನ ಮಾಡಲಾಗಿದ್ದ ಸಂಜೀವ್ ಕುಮಾರ್ ಎಂಬವರ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ಮರಳಿಸುವ ಬಗ್ಗೆ ಅಲ್ಲಿನ ಸರಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಸರಕಾರ ಗುರುವಾರ ದಿಲ್ಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಸಂಜೀವ್ ಕುಮಾರ್(51 ವರ್ಷ) ಜನವರಿ 24ರಂದು ಹೃದಯಾಘಾತದಿಂದ ಮೃತಪಟ್ಟಿದ್ದು ಅವರ ಪಾರ್ಥಿವ ಶರೀರವನ್ನು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು. ಕುಮಾರ್ ಮೃತಪಟ್ಟಿರುವ ಬಗ್ಗೆ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕುಟುಂಬದವರಿಗೆ ಮಾಹಿತಿ ನೀಡಿದ್ದು ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಬಗ್ಗೆ ಕುಟುಂಬದವರು ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

   

ಈ ಮಧ್ಯೆ, ಸಂಜೀವ್ ಕುಮಾರ್ ಪಾರ್ಥಿವ ಶರೀರವನ್ನು ಜಿದ್ದಾದಲ್ಲಿ ದಫನ ಮಾಡಿರುವುದಾಗಿ ಫೆಬ್ರವರಿ 18ರಂದು ಮಾಹಿತಿ ಬಂದಿದೆ ಎಂದು ಮೃತರ ಪತ್ನಿ ಅಂಜು ಶರ್ಮ ಹೇಳಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ, ಭಾರತೀಯ ರಾಯಭಾರ ಕಚೇರಿಯ ಸಿಬಂದಿ ಮಾಡಿದ್ದ ಎಡವಟ್ಟು ಬೆಳಕಿಗೆ ಬಂದಿದೆ. ಮರಣ ಪ್ರಮಾಣಪತ್ರದಲ್ಲಿ ಧರ್ಮ ಕಾಲಂನಲ್ಲಿ ಮುಸ್ಲಿಂ ಎಂದು ನಮೂದಿಸಿರುವುದಾಗಿ ಅಧಿಕಾರಿಗಳು ಹೇಳಿದ್ದು ಜೊತೆಗೆ ಈ ಬಗ್ಗೆ ಕ್ಷಮಾಪಣೆ ಪತ್ರವನ್ನೂ ನೀಡಿದ್ದಾರೆ . ತಾನು ಅಥವಾ ಕುಟುಂಬದ ಯಾವುದೇ ಸದಸ್ಯರು ಪಾರ್ಥಿವ ಶರೀರದ ದಫನಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದು ಅಂಜು ಶರ್ಮ ದಿಲ್ಲಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದಫನ ಮಾಡಿದ ಸ್ಥಳದಿಂದ ಮೃತದೇಹದ ಅವಶೇಷಗಳನ್ನು ಹೊರತೆಗೆದು ಭಾರತಕ್ಕೆ ಮರಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ವಿದೇಶ ವ್ಯವಹಾರ ಇಲಾಖೆಗೆ ಸೂಚಿಸಿದೆ. ಇದಕ್ಕೆ ಉತ್ತರಿಸಿದ್ದ ವಿದೇಶ ವ್ಯವಹಾರ ಇಲಾಖೆ, ಪಾರ್ಥಿವ ಶರೀರದ ಅವಶೇಷಗಳನ್ನು ಭಾರತಕ್ಕೆ ಮರಳಿ ತರಲು ಜಿದ್ದಾದ ಭಾರತೀಯ ರಾಯಭಾರ ಕಚೇರಿ ಸೌದಿ ಅರೇಬಿಯಾದ ನ್ಯಾಯಾಲಯದಲ್ಲಿ ಕಾನೂನು ಉಪಕ್ರಮ ಆರಂಭಿಸಿದೆ ಎಂದು ಹೇಳಿತ್ತು.

ಗುರುವಾರ ಹೈಕೋರ್ಟ್ನೆದುರು ಹಾಜರಾದ ಕೇಂದ್ರ ಸರಕಾರದ ಪ್ರತಿನಿಧಿ ರಿಪುದಮನ್ ಸಿಂಗ್ ಭಾರದ್ವಾಜ್, ಪಾರ್ಥಿವ ಶರೀರದ ಅವಶೇಷಗಳನ್ನು ಭಾರತಕ್ಕೆ ತರಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ವಿಷಯದಲ್ಲಿ ಸರಕಾರಕ್ಕೆ ನೆರವು ನೀಡಲು ಆಮಿಕಸ್ ಕ್ಯೂರಿ(ಕಾನೂನು ಹಾಗೂ ಇತರ ವಿಷಯಗಳ ತಜ್ಞ)ಯನ್ನು ನೇಮಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News